Publish Date: Sat, 07 Jun 2025 (12:02 IST)
Updated Date: Sat, 07 Jun 2025 (12:04 IST)
ಬೆಂಗಳೂರು: ಚಿನ್ನಸ್ವಾಮಿ ಮೈದಾನದ ಬಳಿ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಒಂದೊಂದೇ ವಿಚಾರಗಳು ಹೊರಬೀಳುತ್ತಿವೆ. ಸಿಎಂ ಕಚೇರಿಯಿಂದಲೇ ಕಾರ್ಯಕ್ರಮ ಆಯೋಜಿಸಲು ಒತ್ತಡ ಬಂದಿತ್ತು ಎಂದು ಪೊಲೀಸ್ ಮೂಲಗಳೇ ಹೇಳುತ್ತಿವೆ.
ಆಂಗ್ಲ ಮಾಧ್ಯಮವೊಂದರ ವರದಿ ಪ್ರಕಾರ, ಆರ್ ಸಿಬಿ ಫೈನಲ್ ಗೆದ್ದ ಮರುದಿನವೇ ಸಂಭ್ರಮಾಚರಣೆ ಮಾಡಲು ಪೊಲೀಸ್ ಇಲಾಖೆ ಮೊದಲು ಹಿಂಜರಿದಿತ್ತು. ಭದ್ರತೆ ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ಎರಡು ದಿನ ಮುಂದೂಡಲು ಸಲಹೆ ನೀಡಿತ್ತು. ಆದರೆ ಸಿಎಂ ಕಚೇರಿಯಿಂದಲೇ ಒತ್ತಡ ಬಂದಿತ್ತು ಎಂಬ ಕಾರಣಕ್ಕೆ ಉನ್ನತ ಅಧಿಕಾರಿಗಳು ಭದ್ರತೆ ನೀಡಲು ಒಪ್ಪಿದ್ದರು ಎಂಬ ಮಾಹಿತಿ ಹೊರಬೀಳುತ್ತಿದೆ.
ಸ್ವತಃ ಸಿಎಂ ಕಚೇರಿಯಿಂದಲೇ ಪೊಲೀಸ್ ಆಯುಕ್ತ ಬಿ ದಯಾನಂದ ಅವರಿಗೆ ಎಲ್ಲಾ ಸಿದ್ಧತೆ ಮಾಡಲು ಸೂಚನೆ ಬಂದಿತ್ತು. ಅಪಾಯವಿದ್ದರೂ ಸಿದ್ಧತೆ ನಡೆಸಿ ಎಂದು ಸೂಚನೆ ಬಂದಿತ್ತು ಎನ್ನಲಾಗಿದೆ. ಪೊಲೀಸ್ ಕಮಿಷನರ್ ಗೆ ಕಾರ್ಯಕ್ರಮ ಆಯೋಜಿಸುವುದೇ ಇಷ್ಟವಿರಲಿಲ್ಲ ಎನ್ನುತ್ತಿದೆ ಪೊಲೀಸ್ ಇಲಾಖೆ ಮೂಲಗಳು.
ಹಾಗಿದ್ದ ಮೇಲೆ ಈಗ ಬಿ ದಯಾನಂದ ಅವರನ್ನು ಹೊಣೆಗಾರರನ್ನಾಗಿ ಮಾಡಿ ಅಮಾನತು ಮಾಡಿರುವುದು ಯಾಕೆ ಎಂದು ಪೊಲೀಸ್ ಇಲಾಖೆಯೊಳಗೇ ಅಸಮಾಧಾನ ಮೂಡಿದೆ ಎನ್ನಲಾಗಿದೆ. ಆರ್ ಸಿಬಿ ಟೀಂ ಬಂದಾಗ ಮೊದಲು ಹೋಗಿ ಸ್ವಾಗತಿಸಿದ್ದೇ ಡಿಕೆ ಶಿವಕುಮಾರ್. ಈಗ ಕ್ರಮ ಮಾತ್ರ ಪೊಲೀಸರ ಮೇಲೆ ಯಾಕೆ ಎಂಬುದು ಅಧಿಕಾರಿಗಳ ಅಸಮಾಧಾನವಾಗಿದೆ.