Select Your Language

Notifications

webdunia
webdunia
webdunia
webdunia

ಜಾತಿಗಣತಿ ಮಾಡುವ ಹಿಂದುಳಿದ ಆಯೋಗದ ರಿಮೋಟ್ ಕಂಟ್ರೋಲ್ ಎಲ್ಲೋ ಇದೆ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy

Krishnaveni K

ಬೆಂಗಳೂರು , ಮಂಗಳವಾರ, 23 ಸೆಪ್ಟಂಬರ್ 2025 (15:19 IST)
ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ರಿಮೋಟ್ ಕಂಟ್ರೋಲ್ ಬೇರೆಲ್ಲೋ ಇದೆ; ಈ ಆಯೋಗವನ್ನು ಆಯೋಗದಲ್ಲಿ ಇರುವವರೇ ನಡೆಸುತ್ತಿಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಇನ್ನೂ 15 ಜಾತಿಗಳಿಗೆ ಕ್ರೈಸ್ತ ಟ್ಯಾಗ್ ನೀಡಿರುವುದನ್ನು ರದ್ದು ಮಾಡಬೇಕೆಂದು ಬಿಜೆಪಿ ನಿಯೋಗ ಒತ್ತಾಯಿಸಿತು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಅವರು, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಿನ್ನೆ ಪ್ರಾರಂಭವಾಗಿದೆ. ಈ ಸಮೀಕ್ಷೆ ಒಂದು ಗೊಂದಲದ ಗೂಡು ಎಂದು ಟೀಕಿಸಿದರು. ಇದು ಹಿಂದುತ್ವ ವಿರೋಧ ನೀತಿ ಎಂದು ಆರೋಪಿಸಿದರು.

ಗೊಂದಲ ಪರಿಹರಿಸಲು ಕೋರಿ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಕೊಟ್ಟಿದ್ದೇವೆ. ಬ್ರಾಹ್ಮಣ ಕ್ರೈಸ್ತರು, ಲಿಂಗಾಯತ ಕ್ರೈಸ್ತರು, ಒಕ್ಕಲಿಗ, ವೀರಶೈವ ಮೊದಲಾದ ಎಲ್ಲರನ್ನೂ ಕ್ರೈಸ್ತ ಎಂದು ಹೆಸರಿಸಿದ್ದಾರೆ. ಹೊಲೆಯ, ಮಾದಿಗ, ಬಂಜಾರ ಕ್ರೈಸ್ತ, ಬೋವಿ ಕ್ರೈಸ್ತ ಎಲ್ಲವನ್ನೂ ಸೇರಿಸಿದ್ದರು ಎಂದು ಆಕ್ಷೇಪಿಸಿದರು.
ಹೋರಾಟಗಳು ನಡೆದು ಪ್ರಭಾವಿ ಸಮುದಾಯಗಳು ಹೋರಾಟಕ್ಕೆ ಇಳಿದಾಗ ಅವುಗಳನ್ನು ಕಾಣದಂತೆ (ಹೈಡ್) ಮಾಡಿದ್ದಾಗಿ ಹೇಳಿದ್ದರು. ಆದರೆ, ಪರಿಶಿಷ್ಟ ಜಾತಿ, ವರ್ಗಗಳದು ಹೈಡ್ ಮಾಡಿಲ್ಲ. ಇದರಿಂದ ಗೊಂದಲವಾಗಿದೆ ಎಂದರು. ಎಲ್ಲ ಜಾತಿಗಳನ್ನು ಸಂಪೂರ್ಣ ಕೈಬಿಟ್ಟಿಲ್ಲ ಎಂದು ದೂರಿದರು.
ಸುತ್ತಿ ಬಳಸಿ ಮಾತನಾಡುತ್ತಿದ್ದಾರೆ. ಕ್ರೈಸ್ತರಾಗಿ ಮತಾಂತರ ಹೊಂದಿದವರ ಮೂಲಜಾತಿ ಹಾಗೇ ಉಳಿಯುತ್ತದೆ ಎಂದು ಹೇಳಿದ್ದಾರೆ. ಅದ್ಹೇಗೆ ಉಳಿಯಲು ಸಾಧ್ಯ ಎಂದು ಕೇಳಿದರು. ಮೂಲಜಾತಿಯಲ್ಲೇ ಮೀಸಲಾತಿ ಕೊಡಬೇಕೇ ಎಂದು ತೀರ್ಮಾನ ಮಾಡುತ್ತಾರಂತೆ. ಕೋರ್ಟ್ ತೀರ್ಮಾನ ಮಾಡಿದೆ, ತೀರ್ಮಾನ ಮಾಡಲು ಇವರ್ಯಾರು ಎಂದು ಕೇಳಿದರು. ದಲಿತರು ಕ್ರೈಸ್ತರಾಗಿ ಸೇರಿದರೆ ಅವರನ್ನು ದಲಿತರೆಂದು ಪರಿಗಣಿಸಲಾಗುವುದಿಲ್ಲ; ಇಲ್ಲಿ ಗೊಂದಲವಿದೆ ಎಂದು ಟೀಕಿಸಿದರು.

ಮತಾಂತರ ಆದವರ ಜಾತಿ ನೋಡದಿರಿ. ಇದೇರೀತಿ ಮುಂದುವರೆಸಿ ಕೇರಿಗಳಲ್ಲಿ ಬರುವುದಾದರೆ, ನೀವು ಒಂದೇ ಒಂದು ಬರಹ ಬರೆದುಕೊಳ್ಳಲು ಸಾಧ್ಯವಿಲ್ಲ. ಅಲ್ಲ ನಮ್ಮ ಜನ ಬಿಡುವುದಿಲ್ಲ ಎಂದು ತಿಳಿಸಿದರು. ಸದಾಶಿವ ಆಯೋಗ, ನಾಗಮೋಹನ್ ದಾಸ್ ಆಯೋಗ, ಕಾಂತರಾಜು ಆಯೋಗ, ಜಯಪ್ರಕಾಶ್ ಹೆಗ್ಡೆ ಆಯೋಗದಲ್ಲಿ ಪರಿಶಿಷ್ಟ ಜಾತಿಗೆ ಕ್ರಿಶ್ಚಿಯನ್ ಪದ ಇರಲಿಲ್ಲ ಎಂದು ವಿವರಿಸಿದರು. ಈಗ ಎಲ್ಲಿಂದ ಯಾಕೆ ಹುಟ್ಟಿದೆ? ಇವತ್ತು ಸಂಜೆಯೇ ಸಭೆ ಕರೆದು ತೀರ್ಮಾನ ಮಾಡುವುದಾಗಿ ಅಧ್ಯಕ್ಷರು ತಿಳಿಸಿದ್ದಾಗಿ ವಿವರಿಸಿದರು. ಇವತ್ತೇ ತೀರ್ಮಾನ ಆಗದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಆಯೋಗವೇ ಹೊಣೆ ಎಂದು ಹೇಳಿದರು.

ಮಾತನಾಡುವಾಗ ವಾದವಿವಾದವೂ ಆಗಿದೆ. ಜನರಲ್ಲಿ ನೋವಿದೆ. ಕ್ರಿಶ್ಚಿಯನ್ ಧರ್ಮ ಸೇರ್ಪಡೆಗೆ ವಿರೋಧ ಇಲ್ಲ; ಆಯೋಗವು ದಲ್ಲಾಳಿ ಕೆಲಸ ಮಾಡುತ್ತಿದ್ದಾರಾ ಎಂದು ಪ್ರಶ್ನಿಸಿದರು.
 
 
ಮನವಿಯಲ್ಲಿ ಏನಿದೆ?
ಸಮೀಕ್ಷೆ ವಿಷಯದ ಸಂಬಂಧ ಕಳೆದ ಆಗಸ್ಟ್ 23 ರಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ 4 ಪುಟಗಳ ಜಾಹಿರಾತನ್ನು ಪತ್ರಿಕೆಗಳಿಗೆ ಕೊಟ್ಟು ಸಮೀಕ್ಷೆಗೆ ಸಿದ್ಧಪಡಿಸಿರುವ 1,400 ಜಾತಿಗಳ ಪಟ್ಟಿ ಘೋಷಿಸಿತು. ಆ ಪಟ್ಟಿಯಲ್ಲಿ 48 ಹಿಂದು ಜಾತಿಗಳನ್ನು ಕ್ರಿಶ್ಚಿಯನ್ ಎಂದು ಗುರುತಿಸಲಾಗಿತ್ತು. ಈ 48 ಜಾತಿಗಳಲ್ಲಿ 15 ಎಸ್ಸಿ ಜಾತಿಗಳು ಮತ್ತು 1 ಎಸ್‍ಟಿ (ವಾಲ್ಮೀಕಿ ಕ್ರಿಶ್ಚಿಯನ್) ಜಾತಿಗಳಿದ್ದವು. ರಾಜ್ಯಾದ್ಯಂತ ತೀವ್ರ ಸ್ವರೂಪ ಪ್ರತಿಕ್ರಿಯೆ ವ್ಯಕ್ತವಾಯಿತು. ಸೆ. 2 ರಂದು ನಿಮ್ಮನ್ನು ಭೇಟಿ ಮಾಡಿದ್ದ ಬಿಜೆಪಿ ನಿಯೋಗ ವಿಸ್ತøತವಾಗಿ ಚರ್ಚಿಸಿ ಆಕ್ಷೇಪಣೆ ಸಲ್ಲಿಸಿತ್ತು. ಇದೇ ಸೆ.21 ರಂದು  ಆಯೋಗದ ಅಧ್ಯಕ್ಷರಾದ ತಾವು ಪತ್ರಿಕಾಗೋಷ್ಠಿಯಲ್ಲಿ 33 ಹಿಂದು ಜಾತಿಗಳನ್ನು ಕ್ರೈಸ್ತ ಪಟ್ಟಿಯಿಂದ ಸಮೀಕ್ಷೆಗೆ ಬಳಸುವ ಆಪ್‍ನಲ್ಲಿ ಕಾಣದಂತೆ ಮಾಡಿರುವುದಾಗಿ ಹೇಳಿದ್ದೀರಿ. ಅತ್ಯಂತ ಸೂಕ್ತವಾದ ಈ ಕ್ರಮವನ್ನು ತೆಗೆದುಕೊಂಡು ಮಾಧ್ಯಮಗಳ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ಮನವರಿಕೆ ಕೊಟ್ಟಿದ್ದಕ್ಕೆ ತಮಗೆ ಅಭಿನಂದನೆಗಳು ಎಂದು ಮನವಿ ತಿಳಿಸಿದೆ.
 
48 ಜಾತಿಗಳ ಬಗ್ಗೆ ಆಕ್ಷೇಪ ಇತ್ತು. 33 ಜಾತಿಗಳ ಬಗ್ಗೆ ನೀವು ಸರಿಪಡಿಸಿ ಸ್ಪಷ್ಟನೆ ಕೊಟ್ಟಿದ್ದೀರಿ. ಅಧಿಕೃತವಾಗಿ ತೆಗೆಯದೇ ಉಳಿದಿರುವ ಜಾತಿಗಳೆಲ್ಲವೂ ಪರಿಶಿಷ್ಟ ಜಾತಿಗಳೇ ಆಗಿರುವುದು ಆತಂಕದ ಬೆಳವಣಿಗೆಯಾಗಿದೆ ಎಂದು ನಿಯೋಗ ತಿಳಿಸಿದೆ. ಆದಿ ಆಂಧ್ರ ಕ್ರಿಶಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್, ಆದಿದ್ರಾವಿಡ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಬುಡುಗ ಜಂಗಮ ಕ್ರಿಶ್ಚಿಯನ್, ಹೊಲೆಯ ಕ್ರಿಶ್ಚಿಯನ್, ಲಮಾಣಿ ಕ್ರಿಶ್ಚಿಯನ್, ಲಂಬಾಣಿ ಕ್ರಿಶ್ಚಿಯನ್, ಮಾದಿಗ ಕ್ರಿಶ್ಚಿಯನ್, ಮಹಾರ್ ಕ್ರಿಶ್ಚಿಯನ್, ಮಾಲಾ ಕ್ರಿಶ್ಚಿಯನ್, ಪರಯ ಕ್ರಿಶ್ಚಿಯನ್, ವಡ್ಡ ಕ್ರಿಶ್ಚಿಯನ್, ವಾಲ್ಮೀಕಿ ಕ್ರಿಶ್ಚಿಯನ್ ಈ ಜಾತಿಗಳ ಕ್ರಿಶ್ಚಿಯನ್ ಟ್ಯಾಗ್ ಅನ್ನು ಸಮೀಕ್ಷೆನಲ್ಲಿ ಕಾಣಿಸದಂತೆ ಹೈಡ್ ಮಾಡಿದ ಅಧಿಕೃತ ಪ್ರಕಟಣೆಯನ್ನು  ಅಯೋಗ ಕೊಡಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ಮನವಿ ತಿಳಿಸಿದೆ.
 
ಈ ವಿಷಯದಲ್ಲಿ ಅತ್ಯಂತ ಜವಾಬ್ದಾರಿಯುತ ಸಂಸ್ಥೆಯಾದ ಹಿಂದುಳಿದ ವರ್ಗಗಳ ಆಯೋಗ 33 ಕ್ರೈಸ್ತ ಜಾತಿಗಳ ಬಗ್ಗೆ ಸ್ಪಷ್ಟನೆ ಕೊಟ್ಟು,  ಉಳಿದ ದಲಿತ ಕ್ರೈಸ್ತ ಜಾತಿಗಳ ಬಗ್ಗೆ ಸ್ಪಷ್ಟನೆ ಕೊಡದೆ, ಕತ್ತಲಲ್ಲಿ ಇಟ್ಟಿರುವುದು ಸಮರ್ಥನೀಯವಲ್ಲ ಎಂದು ಮನವಿ ತಿಳಿಸಿದೆ.

ಎರಡು ತಿಂಗಳ ಹಿಂದೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ 101 ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನೇ ಮಾಡಿತ್ತು. ಆಗ ಈ 15 ಕ್ರೈಸ್ತ ಎಸ್‍ಸಿ ಜಾತಿಗಳು ಇರಲಿಲ್ಲ. ನ್ಯಾ ನಾಗಮೋಹನ್ ದಾಸ್ ಆಯೋಗದ ಸಮೀಕ್ಷೆಯ ದತ್ತಾಂಶಗಳ ಆಧಾರದಲ್ಲಿ ಪ್ರವರ್ಗಗಳ ರಚನೆಯಾಗಿ ಮೀಸಲಾತಿಯ ವರ್ಗೀಕರಣವಾಗಿದೆ. ಈಗ ನಿಮ್ಮ ಆಯೋಗದಿಂದ 15 ಹೊಸ ಕ್ರೈಸ್ತ ಎಸ್‍ಸಿ ಜಾತಿಗಳ ಸೇರ್ಪಡೆಯಾಗಿ ಸಮೀಕ್ಷೆ ನಡೆದರೆ ದೊಡ್ಡ ಗೊಂದಲ ಉಂಟಾಗಿ ದತ್ತಾಂಶಗಳು ಏರುಪೇರಾಗುತ್ತದೆ. ಹೀಗಾಗಿ ನೀವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕೆಂದು ನಮ್ಮ ಮನವಿಯಾಗಿದೆ. 
 
ಆನ್‍ಲೈನ್‍ನಲ್ಲಿ ಲಭ್ಯವಿರುವ ತಮ್ಮ ಆಯೋಗದ ಕೈಪಿಡಿಯಲ್ಲಿ ತಾವು ಈ ತಪ್ಪನ್ನು ಸರಿಪಡಿಸಿರುವುದು ನಿಜ. ಆದರೆ ಸಮೀಕ್ಷೆಗೆ ಬಳಸುವ ಆಪ್‍ನಲ್ಲೂ ಈ 15 ಎಸ್‍ಸಿ ಜಾತಿಗಳನ್ನು ಕಾಣದಂತೆ ಮಾಡಬೇಕು ಮತ್ತು ಅದನ್ನು ಸಾರ್ವಜನಿಕರ ಅವಗಾಹನೆಗೆ ಮಾಧ್ಯಮಗಳ ಮೂಲಕ ಸ್ಪಷ್ಟಪಡಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಈ ಬಗ್ಗೆ ಆಯೋಗದ ಗೌರವಾನ್ವಿತ ಆಧ್ಯಕ್ಷರಾದ ತಾವು ತುರ್ತು ಗಮನ ಹರಿಸಬೇಕೆಂದು ವಿನಂತಿಸಲಾಯಿತು.
 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯಲ್ಲಿ ಮೋದಿ ಮನೆ ಮುಂದೆನೂ ಗುಂಡಿ ಇದೆ ನಾನೇ ತೋರಿಸ್ತೀನಿ: ಡಿಕೆ ಶಿವಕುಮಾರ್