ಬೆಂಗಳೂರು: ಕರ್ನಾಟಕದಲ್ಲಿ ಜಾತಿ ಗಣತಿ ಮಾಡುತ್ತಿರುವುದರ ವಿರುದ್ಧ ಕೋರ್ಟ್ ನಲ್ಲಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಇಂದು ಮಹತ್ವದ ತೀರ್ಪು ನೀಡಲಿದೆ.
ಜಾತಿ ಸಮೀಕ್ಷೆ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಹಲವು ಅರ್ಜಿ ಸಲ್ಲಿಕೆಯಾಗಿತ್ತು. ನಿನ್ನೆಯೇ ಹೈಕೋರ್ಟ್ ಈ ಅರ್ಜಿಗಳ ವಿಚಾರಣೆ ನಡೆಸಿತ್ತು. ಇಂದು ಇದರ ತೀರ್ಪು ನೀಡುವ ಸಾಧ್ಯತೆಯಿದೆ. ಸಮೀಕ್ಷೆ ತರಾತುರಿಯಲ್ಲಿ ನಡೆಯುತ್ತಿದೆ, ಸಮೀಕ್ಷೆ ನಡೆಸುವ ಉದ್ದೇಶವೇನು ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಅರ್ಜಿ ಸಲ್ಲಿಕೆಯಾಗಿತ್ತು.
ಈ ಎಲ್ಲಾ ತಕರಾರುಗಳ ಹಿನ್ನಲೆಯಲ್ಲಿ ಜಾತಿಗಣತಿಗೆ ಮಧ್ಯಂತರ ತಡೆ ನೀಡಬೇಕೆಂದು ಮನವಿ ಸಲ್ಲಿಸಲಾಗಿತ್ತು. ಇಂದು ಅರ್ಜಿಗಳ ಕೂಲಂಕುಷ ವಿಚಾರಣೆ ನಡೆಸಿದ ಬಳಿಕವಷ್ಟೇ ಜಾತಿ ಗಣತಿಗೆ ತಡೆ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಕೋರ್ಟ್ ಹೇಳಿದೆ.
ಅರ್ಜಿದಾರರ ವಾದದಲ್ಲಿ ಹುರುಳಿದೆ. ಆದರೆ ಕೋರ್ಟ್ ಗೆ ಈಗ ದಸರಾ ರಜೆ ಬರಲಿದೆ. ಹೀಗಾಗಿ ಜಾತಿಗಣತಿಗೆ ಸದ್ಯಕ್ಕೆ ಯಾಕೆ ತಡೆ ನೀಡಬಾರದು ಎಂದು ಸರ್ಕಾರವನ್ನು ಕೋರ್ಟ್ ಪ್ರಶ್ನೆ ಮಾಡಿದೆ. ಹೀಗಾಗಿ ಹೈಕೋರ್ಟ್ ನೀಡುವ ತೀರ್ಪಿನ ಬಗ್ಗೆ ಇಂದು ಕುತೂಹಲ ಕಾದಿದೆ.