ಬೆಂಗಳೂರು: ರಾಜ್ಯಸಭಾ ಸದಸ್ಯೆ, ಇನ್ ಫೋಸಿಸ್ ಸಹ ಸಂಸ್ಥಾಪಕಿ ಸುಧಾಮೂರ್ತಿಯವರನ್ನೂ ಸೈಬರ್ ವಂಚಕರು ವಂಚಿಸಲು ಪ್ರಯತ್ನಿಸಿದ್ದರು. ಆದರೆ ಅವರು ಬಚಾವ್ ಆಗಿದ್ದು ಹೇಗೆ? ಇದು ನಿಮಗೂ ಪಾಠವಾಗುತ್ತದೆ.
ಸಂಸದ ಡಾ ಕೆ ಸುಧಾಕರ್ ಪತ್ನಿಗೆ ಸೈಬರ್ ವಂಚಕರು 14 ಲಕ್ಷ ರೂ. ವಂಚಿಸಿದ ಘಟನೆ ಈಗ ಭಾರೀ ಸುದ್ದಿಯಾಗಿದೆ. ಸಾಮಾನ್ಯರಿಂದ ಹಿಡಿದು ಈ ರೀತಿ ವಿಐಪಿಗಳೂ ಸೈಬರ್ ವಂಚಕರ ಬಲೆಗೆ ಬೀಳುತ್ತಿರುವುದು ಶಾಕಿಂಗ್ ಆಗಿದೆ.
ಈ ನಡುವೆ ಸುಧಾಮೂರ್ತಿಯವರನ್ನೂ ಸೈಬರ್ ವಂಚಕರು ವಂಚಿಸಲು ಪ್ರಯತ್ನಿಸಿದ್ದರು. ನಿಮ್ಮ ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡಲಾಗಿಲ್ಲ, ಅಶ್ಲೀಲ ಮೆಸೇಜ್ ಕಳುಹಿಸಲಾಗುತ್ತಿದೆ. ಹೀಗಾಗಿ ವೈಯಕ್ತಿಕ ಮಾಹಿತಿ ನೀಡಿ ಎಂದು ಒಬ್ಬಾತ ಕರೆ ಮಾಡಿದ್ದ.
ಆದರೆ ಎಚ್ಚೆತ್ತುಕೊಂಡ ಅವರು ಆ ನಂಬರ್ ನ್ನು ಟ್ರೂ ಕಾಲರ್ ನಲ್ಲಿ ಪರಿಶೀಲಿಸಿದ್ದರು. ಆಗ ಟೆಲಿಕಾಂ ಡಿಪಾರ್ಟ್ ಮೆಂಟ್ ಎಂದು ಕಂಡುಬಂದಿತ್ತು. ಹೀಗಾಗಿ ಎಚ್ಚೆತ್ತುಕೊಂಡ ಅವರು ತಕ್ಷಣವೇ ಸೈಬರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದೇ ರೀತಿ ಪೊಲೀಸ್, ಸಿಐಡಿ, ಸಿಬಿಐ ಇಲಾಖೆ ಅಧಿಕಾರಿಗಳು ಎಂದೆಲ್ಲಾ ಹೇಳಿಕೊಂಡು ವಂಚಕರು ಕರೆ ಮಾಡುತ್ತಾರೆ. ಇಂತಹ ಕರೆ ಬಂದ ತಕ್ಷಣ ಅದನ್ನು ಕುರುಡಾಗಿ ನಂಬುವ ಬದಲು ನಂಬರ್ ಯಾರದ್ದು ಎಂದು ಪತ್ತೆ ಹಚ್ಚಲು ಪ್ರಯತ್ನಿಸಿ. ಅನುಮಾನ ಬಂದರೆ ತಕ್ಷಣವೇ ಸೈಬರ್ ಪೊಲೀಸರಿಗೆ ಮಾಹಿತಿ ನೀಡಿ. ಯಾಕೆಂದರೆ ಯಾರೂ ಈ ರೀತಿ ಫೋನ್ ಕರೆ ಮಾಡಿ ನಿಮ್ಮ ವೈಯಕ್ತಿಕ ಮಾಹಿತಿ ಕೇಳಲ್ಲ. ಇದು ವಂಚಕರದ್ದೇ ಜಾಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.