Select Your Language

Notifications

webdunia
webdunia
webdunia
webdunia

ಕ್ರಿಶ್ಚಿಯನ್ ಧರ್ಮ ಬೆಳೆಸಲು ಜಾತಿಗಣತಿ ಬೂಟಾಟಿಕೆ ಮಾಡ್ತಿದೆ ಸರ್ಕಾರ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy

Krishnaveni K

ಬೆಂಗಳೂರು , ಸೋಮವಾರ, 22 ಸೆಪ್ಟಂಬರ್ 2025 (15:27 IST)
ಬೆಂಗಳೂರು: ಒಂದು ನಿಗದಿತ ಧರ್ಮವನ್ನು ಬೆಳೆಸುವ ಉದ್ದೇಶ ಸರಕಾರಕ್ಕೆ ಇದೆಯೇ? ಈ ಸಮೀಕ್ಷೆಯಲ್ಲಿ ಆದಿ ಆಂಧ್ರ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್, ಆದಿದ್ರಾವಿಡ ಕ್ರಿಶ್ಚಿಯನ್ ಸೇರಿ ಹತ್ತಾರು ಜಾತಿಗಳನ್ನು ಸೇರಿಸಲು ನಿಮಗೆ ಯಾರು ಪ್ರೇರೇಪಣೆ ಕೊಟ್ಟಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದಾರೆ. ಈ ಜಾತಿಗಳ ಕ್ರಿಶ್ಚಿಯನ್ ಟ್ಯಾಗ್ ಅನ್ನು ಸಮೀಕ್ಷೆಯ ವೇಳೆ ಸೇರಿಸಬಾರದು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಗಣತಿ ಮಾಡುವ ಅಧಿಕಾರ ರಾಜ್ಯ ಸರಕಾರಕ್ಕೆ ಇಲ್ಲ ಎಂದರು. ಸಾಮಾಜಿಕ- ಆರ್ಥಿಕ ಸರ್ವೇ ಇದೆಂದು ಹೇಳಿದ್ದಾರೆ. ಆದರೆ, ಇವರು ಜಾತಿಗಳಿಗೆ ಆದಿ ಆಂಧ್ರ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್, ಆದಿದ್ರಾವಿಡ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಬುಡಗ ಜಂಗಮ ಕ್ರಿಶ್ಚಿಯನ್, ಹೊಲೆಯ ಕ್ರಿಶ್ಚಿಯನ್- ಹೀಗೆ ಪರಿಶಿಷ್ಟ ಜಾತಿಗಳಲ್ಲಿ ಇರುವ ಎಲ್ಲಕ್ಕೂ ಕ್ರಿಶ್ಚಿಯನ್ ಪದ ಸೇರಿಸಿದ್ದಾರೆ. ಇವರೆನ್ನೆಲ್ಲ ಕ್ರಿಶ್ಚಿಯನ್ ಮಾಡುವ ಉದ್ದೇಶ ಇದರ ಹಿಂದಿದೆಯೇ ಎಂದು ಕೇಳಿದರು. ಕಾಂಗ್ರೆಸ್ ಸರಕಾರದ ಈ ಸಮೀಕ್ಷೆ ಬೂಟಾಟಿಕೆ ಮತ್ತು ಪುಂಡಾಟಿಕೆಯದು ಎಂದು ಆಕ್ಷೇಪಿಸಿದರು.

ಯಾವ ಜಾತಿಯಿಂದ ಬಂದವರು, ಯಾವ ಧರ್ಮದಿಂದ ಬಂದವರೆಂದು ನೀವು ಸಮೀಕ್ಷೆಯಲ್ಲಿ ತಿಳಿಸಬೇಕಿಲ್ಲ; ಇದು ಸರಕಾರಿ ದಾಖಲೆಗೆ ಬೇಕಾಗಿಲ್ಲ. ಇದೆಲ್ಲ ಬಿಟ್ಟು ಕುರುಬ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್- ಹೀಗೆ ಮಾಡುವುದು ಕಾನೂನುಬಾಹಿರ ಎಂದು ಎಚ್ಚರಿಸಿದರು. ಇದನ್ನು ಮಾಡಿದರೆ ಜನಾಂಗಗಳ ಹೋರಾಟ ಸತತವಾಗಿ ಇರಲಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಯಾರೂ ನೆಮ್ಮದಿಯಿಂದ ಇರಬಾರದೆಂಬ ಉದ್ದೇಶ ಸರಕಾರಕ್ಕೆ ಬಂದರೆ, ಇನ್ನು ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷಾ ವರದಿ ಹೇಗಿರುತ್ತದೆ ಎಂಬುದು ಜನರಿಗೆ ಬಿಟ್ಟ ವಿಚಾರ ಎಂದು ಆಕ್ಷೇಪ ವ್ಯಕ್ತಪಡಿಸಿದರು.
 
ಸಮೀಕ್ಷೆ ವಿಚಾರದಲ್ಲಿ ಟ್ರಂಪ್ ಮಾರ್ಗದರ್ಶನ ನೀಡಿದರೇ?
ಸಮೀಕ್ಷೆ ವಿಚಾರದಲ್ಲಿ ಟ್ರಂಪ್ ಮಾರ್ಗದರ್ಶನ ನೀಡಿದರೇ? ಸೋನಿಯಾ ಗಾಂಧಿ ಈ ರೀತಿ ಮಾಡಲು ಹೇಳಿದ್ದಾರಾ? ಜನಸಾಮಾನ್ಯರು ಅರ್ಜಿ ನೀಡಿ ಅಥವಾ ಬೀದಿಗಿಳಿದು ಕ್ರಿಶ್ಚಿಯನ್ ಅಂತ ಸೇರಿಸಲು ಒತ್ತಾಯಿಸಿದರೇ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಕೇಳಿದರು.

ಇದನ್ನು ಮಾಡದಂತೆ ಜನರು ಬೀದಿಗೆ ಇಳಿದಿದ್ದಾರೆ. ನಿಮಗೆ ಅದರ ಕುರಿತು ಗೌರವ ಇಲ್ಲ; ಮುಖ್ಯಮಂತ್ರಿ ಒಬ್ಬರನ್ನು ಹೊರತುಪಡಿಸಿದರೆ ಇಡೀ ಕಾಂಗ್ರೆಸ್ ಸಚಿವಸಂಪುಟವು ಇದರ ವಿರುದ್ಧ ಇದೆ ಎಂದು ತಿಳಿಸಿದರು. ಬಿಜೆಪಿ ಪೂರ್ಣ ಮುಖಂಡತ್ವ ನಿಮ್ಮ ವಿರುದ್ಧ ಇದೆ. ಜನತಾದಳ ವಿರುದ್ಧ ಇದೆ. ಮಠಮಾನ್ಯಗಳ ಗುರುಹಿರಿಯರು, ಸಮುದಾಯಗಳ ಮುಖಂಡರು ನಿಮ್ಮ ವಿರುದ್ಧ ಇದ್ದಾರೆ ಎಂದು ಗಮನ ಸೆಳೆದರು.
 
ರಾಜ್ಯದಲ್ಲಿ ಅತಿಯಾದ ಗೊಂದಲದಿಂದ, ಗೊಂದಲಗಳ ಮಧ್ಯೆ ಇವತ್ತಿನಿಂದ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಜಾತಿಗಳ ಸಮೀಕ್ಷೆ ಮಾಡಲು ಸರಕಾರ ಮುಂದಾಗಿದೆ ಎಂದು ದೂರಿದರು. ಈ ಸಮೀಕ್ಷೆ ಹೊಸದೇನೂ ಅಲ್ಲ; ಕಾಂತರಾಜು ಆಯೋಗ ರಚಿಸಿ ಸಮೀಕ್ಷೆ ಮಾಡಲಾಗಿತ್ತು. ಸರಕಾರ ಅದನ್ನು ಒಪ್ಪಲಿಲ್ಲ. ಆ ವರದಿ ಎಲ್ಲಿ ಹೋಯಿತೆಂದು ಗೊತ್ತಿಲ್ಲ; ಅದು ಕಳವಾಗಿದೆಯಂತೆ; ಅದೇನು ಚಿನ್ನವೇ ಎಂದು ಕೇಳಿದರು. ಕದ್ದ ಆಯೋಗದ ವರದಿಯನ್ನು ಪತ್ತೆ ಮಾಡಲು ಈ ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದು ನುಡಿದರು.
 
ಮೊದಲನೇ ಆಯೋಗಕ್ಕೆ ಸುಮಾರು 180 ಕೋಟಿ ಖರ್ಚು ಮಾಡಿದ್ದರು. ಜಯಪ್ರಕಾಶ್ ಹೆಗ್ಡೆಯವರ ಆಯೋಗದ ವರದಿಗೆ ಎಷ್ಟು ಖರ್ಚಾಗಿದೆ ಎಂದು ಬಾಯಿ ಬಿಡುತ್ತಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು. ಕಾಂತರಾಜು ವರದಿ ಒಪ್ಪಿದ್ದರೆ ಜನರ ಭಾವನೆಗೆ ಗೌರವ ಬರುತ್ತಿತ್ತು ಎಂದರು.

ಈಗ ಮತ್ತೆ 425 ಕೋಟಿ ಖರ್ಚು ಮಾಡುತ್ತಿದ್ದಾರೆ. ಇದೇನು ಕಾಂಗ್ರೆಸ್ಸಿನ ಖಜಾನೆ, ಮನೆಯಿಂದ ತಂದು ಕೊಡುತ್ತೀರಾ ಎಂದು ಕೇಳಿದರು. ಜನರ ಹಣವನ್ನು ಇಷ್ಟ ಬಂದಂತೆ ಪೋಲು ಮಾಡಲು ನಿಮಗೆ ಯಾರು ಅಧಿಕಾರ ಕೊಟ್ಟವರು ಎಂದು ಪ್ರಶ್ನೆಯನ್ನು ಮುಂದಿಟ್ಟರು.
 
ರಾಜ್ಯ ಅಭಿವೃದ್ಧಿ ಶೂನ್ಯವಾಗಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸಲು ಸಾಧ್ಯ ಆಗುತ್ತಿಲ್ಲ; ನಗರಗಳಲ್ಲಿ ಗುಂಡಿ ಮುಚ್ಚಲು ಯೋಗ್ಯತೆ ಇಲ್ಲ. ಇಲ್ಲಿಂದ ಕಾಲ್ತೆಗೆಯುವ ಕುರಿತು ರಾಜ್ಯದ ಕೈಗಾರಿಕೋದ್ಯಮಿಗಳು ನಿಮಗೆ ಪತ್ರ ಬರೆಯುತ್ತಿದ್ದಾರೆ; ಟ್ವೀಟ್ ಮಾಡಿ ತಿಳಿಸುತ್ತಿದ್ದಾರೆ. ಜನರ ಗಮನ ಬೇರೆಡೆ ಸೆಳೆಯಲು ಸಮೀಕ್ಷೆಯ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು. ಗುಂಡಿ ಮುಚ್ಚಲು ಆಗದವರು ಇವರು ಬೆಂಗಳೂರಿಗೆ ಸುರಂಗ ಮಾಡ್ತಾರಂತೆ ಎಂದು ಟೀಕಿಸಿದರು.
 
15 ದಿನಗಳಲ್ಲಿ ಸಮೀಕ್ಷೆ ಸಾಧ್ಯವೇ?
15 ದಿನಗಳಲ್ಲಿ ಸುಮಾರು 7 ಕೋಟಿ ಜನರ ಸಮೀಕ್ಷೆ ಮುಗಿಸುವುದಾಗಿ ಹೇಳಿದ್ದಾರೆ. ಪರಿಶಿಷ್ಟ ಜಾತಿಗಳದು ನೀವೇ ಹೇಳಿದಂತೆ 1 ಕೋಟಿ 7 ಲಕ್ಷ ಜನಸಂಖ್ಯೆ. 1 ಕೋಟಿ 7 ಲಕ್ಷ ಜನಸಂಖ್ಯೆಯ ಸಮೀಕ್ಷೆಗೆ 3-4 ಸಾರಿ ಮುಂದೂಡಿ 2ರಿಂದ ಎರಡೂವರೆ ತಿಂಗಳ ಕಾಲ ಸಮೀಕ್ಷೆ ಮಾಡಿದ್ದೀರಿ ಎಂದು ಗಮನ ಸೆಳೆದರು.

ಶೇ 65ರಷ್ಟು ಮಾತ್ರ ಮಾಡಿದ್ದೀರಿ. ಉಳಿದುದೆಲ್ಲ ಬೋಗಸ್, ಬೊಗಳೆ ಅಂಕಿಅಂಶ ಎಂದು ಆಕ್ಷೇಪಿಸಿದರು. ಇದು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಕೇವಲ 15 ದಿನಗಳಲ್ಲಿ ಇಡೀ ರಾಜ್ಯದ ಸಮೀಕ್ಷೆ ಮಾಡುವುದಾದರೆ ಉಪಗ್ರಹ ಆಧಾರದಡಿ ಸಮೀಕ್ಷೆ ಆಗಬೇಕಷ್ಟೇ ಎಂದು ನುಡಿದರು.

 
ಜಯಪ್ರಕಾಶ್ ಹೆಗ್ಡೆಯವರ ಆಯೋಗದ ವರದಿ ತರಿಸಿಕೊಂಡರು. ಅದೂ ಆಯಿತು. ವರದಿ ಒಪ್ಪಿಗೆ ಪಡೆಯಲಿಲ್ಲ; ಈಗ 3ನೇ ಆಯೋಗದ ವರದಿಗೆ ಹೊರಟಿದ್ದಾರೆ. ಮೊದಲನೇ ಆಯೋಗದ ವರದಿಗೆ ಗೊಂದಲ ಇರಲಿಲ್ಲ. ಎರಡನೇ ವರದಿ ಬಂದಾಗ ಅಲ್ಪ ಗೊಂದಲ ಆರಂಭವಾಗಿತ್ತು. ಈಗ 3ನೇ ಆಯೋಗ ಮಾಡಿದ್ದು, ಸಂಪೂರ್ಣ ಗೊಂದಲ ಇದೆ ಎಂದು ಆಕ್ಷೇಪಿಸಿದರು. ಎಲ್ಲರ ಇಚ್ಛಾಶಕ್ತಿಗೆ ವಿರುದ್ಧವಾಗಿ ಕಾಂಗ್ರೆಸ್ ಸರಕಾರವು, ಈ ಆಯೋಗದ ವರದಿ ತಯಾರಿಸಲು ಹೊರಟಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಅರಿಶಿನ ಕುಂಕುಮ, ಬಾಗಿನದ ಬಗ್ಗೆ ಬಾನು ಮುಷ್ತಾಕ್ ಇಂದು ದಸರಾದಲ್ಲಿ ಹೇಳಿದ್ದು ನೋಡಿ