ಬೆಂಗಳೂರು: ರಾಜಕೀಯ ಏನೇ ಇರಲಿ, ತಮ್ಮ ಸಮುದಾಯ ಅಂತ ಬಂದಾಗ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಎಚ್ ಡಿ ಕುಮಾರಸ್ವಾಮಿ ರಾಜಕೀಯ ವೈಷಮ್ಯ ಮರೆತು ಒಂದಾಗಿದ್ದಾರೆ.
ಇಂದು ಒಕ್ಕಲಿಗ ನಾಯಕರ ಸಭೆಗೆ ಬಂದ ಡಿಕೆ ಶಿವಕುಮಾರ್ ಮತ್ತು ಎಚ್ ಡಿ ಕುಮಾರಸ್ವಾಮಿ ಒಂದೇ ವೇದಿಕೆ ಹಂಚಿಕೊಂಡಿದ್ದಾರೆ. ಜೊತೆಗೇ ಇದ್ದು ದೀಪ ಬೆಳಗಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
ಇನ್ನೂ ಒಂದು ವಿಶೇಷವೆಂದರೆ ಡಿಸಿಎಂ ಡಿಕೆ ಶಿವಕುಮಾರ್ ಅವರ ನಿರ್ಧಾರವೊಂದನ್ನು ಎಚ್ ಡಿ ಕುಮಾರಸ್ವಾಮಿ ವೇದಿಕೆಯಲ್ಲೇ ಹೊಗಳಿದ್ದಾರೆ. ಜಾತಿ ಗಣತಿ ವಿಚಾರವಾಗಿ ಡಿಕೆ ಶಿವಕುಮಾರ್ ಸಚಿವ ಸಂಪುಟ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದನ್ನು ಎಚ್ ಡಿಕೆ ಶ್ಲಾಘಿಸಿದ್ದಾರೆ.
ಕೇಂದ್ರ ಸರ್ಕಾರ ಜಾತಿ ಗಣತಿ ಮಾಡಲು ಹೊರಟಿದೆ. ಹೀಗಿರುವಾಗ ರಾಜ್ಯ ಸರ್ಕಾರ ಮಾಡುವ ಅಗತ್ಯವೇನಿತ್ತು. ಈಗಾಗಲೇ ತಯಾರಿಸುವ ಕಾಂತರಾಜು ವರದಿ ಕಸದ ಬುಟ್ಟಿ ಸೇರಿದೆ. ಈಗ ಇನ್ನೊಂದು ಜಾತಿ ಗಣತಿ ಅಗತ್ಯವಿತ್ತೇ? ಈ ನಿಟ್ಟಿನಲ್ಲಿ ಡಿಕೆ ಶಿವಕುಮಾರ್ ಅವರು ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವಿರೋಧಿಸಿದರು ಎಂದು ಕೇಳ್ಪಟ್ಟೆ. ಇದನ್ನು ಮೆಚ್ಚುತ್ತೇನೆ ಎಂದಿದ್ದಾರೆ. ರಾಜಕೀಯ ವೈಷಮ್ಯಗಳು ಏನೇ ಇರಲಿ ತಮ್ಮ ಸಮುದಾಯ ಎಂದು ಬಂದಾಗ ಇಬ್ಬರೂ ನಾಯಕರು ಅದನ್ನೆಲ್ಲಾ ಮರೆತು ಒಂದಾಗಿದ್ದಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.