ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿಯಿಡೀ ಸುರಿದ ಮಳೆಗೆ ರಸ್ತೆಗಳೆಲ್ಲಾ ಜಲಾವೃತವಾಗಿದ್ದು ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಲೇಟೆಸ್ಟ್ ಹವಾಮಾನ ವರದಿ ಇಲ್ಲಿದೆ.
ಬೆಂಗಳೂರಿನ ಹಲೆವೆಡೆ ನಿನ್ನೆ ರಾತ್ರಿಯಿಡೀ ಸುರಿದ ಮಳೆಯಿಂದ ಎಲ್ಲಿ ನೋಡಿದರೂ ನೀರು ಎಂಬ ಪರಿಸ್ಥಿತಿಯಾಗಿದೆ. ನಿನ್ನೆ ಹಗಲು ಬಿಡುವು ನೀಡಿದ್ದ ವರುಣ ಸಂಜೆಯಿಂದ ಸುರಿಯಲು ಆರಂಭವಾಗಿದೆ. ಇಂದು ಬೆಳಗಿನ ಜಾವದವರೆಗೂ ನಿರಂತರವಾಗಿ ಮಳೆಯಾಗಿದೆ. ಇದರಿಂದ ಸಾಕಷ್ಟು ಕಡೆ ನೀರು ತುಂಬಿದೆ.
ಮೆಜೆಸ್ಟಿಕ್, ಕೋರಮಂಗಲ, ಹೆಬ್ಬಾಳ, ಕೆಆರ್ ಪುರಂ, ಬನ್ನೇರು ಘಟ್ಟ, ಕೆಂಗೇರಿ, ಬನಶಂಕರಿ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಇದೀಗ ಸೂರ್ಯನ ದರ್ಶನವಾದರೂ ರಾತ್ರಿಯಿಂದ ಸುರಿದ ಮಳೆಯಿಂದಾಗಿ ಎಲ್ಲಾ ಕಡೆ ನೀರು ನಿಂತಿರುವುದರಿಂದ ವಾಹನ ಸಂಚಾರಕ್ಕೂ ತೊಡಕಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಬೆಂಗಳೂರಿನ ಎಲ್ಲಾ ಶಾಲಾ-ಕಾಲೇಜುಗಳು, ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಅನಗತ್ಯವಾಗಿ ಮನೆಯಿಂದ ಹೊರಹೋಗದಂತೆ ಬಿಬಿಎಂಪಿ ಸೂಚನೆ ನೀಡಿದೆ. ಮಕ್ಕಳನ್ನು ಅನಗತ್ಯ ಮನೆಯಿಂ ಹೊರಗೆ ಕಳುಹಿಸದಂತೆ ಮತ್ತು ಶಿಥಿಲ ಕಟ್ಟಡಗಳನ್ನು ಉಪಯೋಗಿಸದಂತೆ ಸೂಚನೆ ನೀಡಲಾಗಿದೆ. ವಿದ್ಯುತ್ ಗೆ ಸಂಬಂಧಿಸಿದ ಯಾವುದೇ ಅನಾಹುತಗಳಾಗಿದ್ದಲ್ಲಿ 1533 ನಂಬರ್ ಗೆ ಕರೆ ಮಾಡಿ ಎಂದು ಬಿಬಿಎಂಪಿ ಸೂಚನೆ ನೀಡಿದೆ. ಮುಂದಿನ ಮೂರು-ನಾಲ್ಕು ದಿನಗಳವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.