ಬೆಂಗಳೂರು: ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ನಿರಂತರ ಮಳೆಯಾಗುತ್ತಿದೆ. ಇಂದು ಬೆಂಗಳೂರಿನ ಹವಾಮಾನ ಹೇಗಿದೆ, ಕರ್ನಾಟಕದಾದ್ಯಂತ ಮಳೆ ಸಾಧ್ಯತೆ ಬಗ್ಗೆ ಇಲ್ಲಿದೆ ಹವಾಮಾನ ವರದಿ.
ಬೆಂಗಳೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ರಾತ್ರಿ ಭಾರೀ ಮಳೆಯಾಗುತ್ತಿದೆ. ನಿನ್ನೆ ರಾತ್ರಿಯೂ ಗುಡುಗು ಸಹಿತ ಮಳೆಯಾಗಿತ್ತು. ಆದರೆ ಬೆಳಗಿನ ಜಾವ ಮಳೆ ಬಿಡುವು ನೀಡಿದ್ದು, ಬೆಳಿಗ್ಗೆ ಬಿಸಿಲಿನ ವಾತಾವರಣವಿದೆ. ಹಾಗಂತ ಇಂದು ಮಳೆ ಬರುವ ಸಾಧ್ಯತೆಯಿಲ್ಲ ಎಂದು ಸಮಾಧಾನಪಡಬೇಕಾಗಿಲ್ಲ.
ಇಂದೂ ಕೂಡಾ ಸಂಜೆವರೆಗೆ ಬಿಸಿಲು, ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಆದರೆ ಸಂಜೆ ವೇಳೆ ಮತ್ತೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ಹೇಳುತ್ತಿದೆ. ಈ ಬಿಸಿಲು-ಮಳೆಯ ವಾತಾವರಣ ಮುಂದಿನ ಮೂರು ದಿನಗಳವರೆಗೆ ಮುಂದುವರಿಯಲಿದೆ.
ನಿನ್ನೆ ರಾತ್ರಿ ಸುರಿದ ಮಳೆಗೂ ಸಾಕಷ್ಟು ಹಾನಿಯಾಗಿದೆ. ರಾಜಕಾಲುವೆಯಲ್ಲಿ ಎರಡು ಕಾರು ಕೊಚ್ಚಿ ಹೋದ ಘಟನೆ ನಡೆದಿದೆ. ರಸ್ತೆಗಳಲ್ಲಿ ಇನ್ನೂ ಅಲ್ಲಲ್ಲಿ ನೀರು ತುಂಬಿಕೊಂಡಿದ್ದು, ವಾಹನ ಸವಾರರ ಪರದಾಟ ಮುಂದುವರಿದಿದೆ. ಕರ್ನಾಟಕದಾದ್ಯಂತ ಅಲ್ಲಲ್ಲಿ ಮಳೆಯಾಗುವ ಸಂಭವವಿದ್ದು, ಭಾಗಶಃ ಮೋಡಕವಿದ ವಾತಾವರಣ ಮುಂದುವರಿಯಲಿದೆ.