ಬೆಂಗಳೂರು: ಕರ್ನಾಟಕದ ಆರ್ಥಿಕ ಪ್ರಗತಿ ದೇಶದ ಆರ್ಥಿಕ ಪ್ರಗತಿಗಿಂತಲೂ ಹೆಚ್ಚಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೊಂಡಿದ್ದು ಇದಕ್ಕೆ ಪ್ರತಿಕ್ರಿಯಿಸಿರುವ ಜನ ಮೊದಲು ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ಯಾರಂಟಿ ಯೋಜನೆಗಳು ಮತ್ತು ಸರ್ಕಾರದ ಆರ್ಥಿಕತೆಯ ನಿರ್ವಹಣೆಯ ಫಲವಾಗಿ ನಮ್ಮ ರಾಜ್ಯದ ಜಿಡಿಪಿ ದರ ದೇಶದ ಜಿಡಿಪಿ ದರಕ್ಕಿಂತಲೂ ವೇಗವಾಗಿ ಬೆಳೆದಿದೆ. ದೇಶದ ಜಿಡಿಪಿ ದರ 8.2% ಇದ್ದರೆ ಕರ್ನಾಟಕದ ಜಿಡಿಪಿ ದರ 10.2% ರಷ್ಟಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಜನ ಮೊದಲು ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಬೆಂಗಳೂರಿನ ರಸ್ತೆಗಳು ಹಳ್ಳದಂತಾಗಿದೆ. ರಸ್ತೆಗಳಲ್ಲಿ ನೀರು ತುಂಬಿ ವಾಹನಗಳು ಓಡಾಡಲು ಡೇಂಜರ್ ಎನ್ನುವ ಪರಿಸ್ಥಿತಿಯಿದೆ.
ಈ ನಡುವೆ ಸರ್ಕಾರ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಈಗ ಸಿದ್ದರಾಮಯ್ಯ ಆರ್ಥಿಕತೆಯ ಪ್ರಗತಿ ಬಗ್ಗೆ ಮಾತನಾಡಿದರೆ ಜನ ರಸ್ತೆಗಳನ್ನೇ ಸರಿಪಡಿಸಲು ಸಾಧ್ಯವಾಗಿಲ್ಲ. ಇನ್ನು, ಆರ್ಥಿಕ ಪ್ರಗತಿ ಎಲ್ಲಿಂದ ಎಂದು ಪ್ರಶ್ನೆ ಮಾಡಿದ್ದಾರೆ.