ಬೆಂಗಳೂರು: ಚೀನಾದ ಅಪಾಯಕಾರಿ ಎಚ್ ಎಂಪಿವಿ ವೈರಸ್ ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಕಂಡುಬಂದಿದೆ ಎನ್ನುವುದೆಲ್ಲಾ ಸುಳ್ಳು ವರದಿಗಳೇ? ಮಗುವಿನ ತಂದೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದೇನು ನೋಡಿ.
ಬೆಂಗಳೂರಿನ 8 ತಿಂಗಳ ಮಗುವಿಗೆ ಎಚ್ ಎಂಪಿವಿ ವೈರಸ್ ಖಚಿತವಾಗಿದೆ ಎಂಬ ಸುದ್ದಿ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಚೀನಾದಲ್ಲಿ ಅಪಾಯಕಾರಿಯಾಗಿರುವ ವೈರಸ್ ಭಾರತಕ್ಕೂ ಅದರಲ್ಲೂ ನಮ್ಮ ಬೆಂಗಳೂರಿಗೆ ಕಾಲಿಟ್ಟಿದೆ ಎಂಬುದು ಜನರಲ್ಲಿ ಆತಂಕ ಮೂಡಿಸಿತ್ತು.
ಆದರೆ ಈ ಬಗ್ಗೆ ಮಗುವಿನ ತಂದೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದೇ ಬೇರೆ. ನನ್ನ ಮಗನಿಗೆ ವೈರಸ್ ತಗುಲಿದೆ ಎಂದು ಹೇಳುವ ಮೊದಲು ನೀವು ಸರಿಯಾಗಿ ವಿಚಾರ ತಿಳಿದುಕೊಳ್ಳಬೇಕು. ನನ್ನ ಮಗ ಬೆಡ್ ಮೇಲಿಂದ ಬಿದ್ದಿದ್ದ. ಅದಾದ ಬಳಿಕ ಅವನಿಗೆ 100-102 ಡಿಗ್ರಿ ಜ್ವರ ಹೋಗುತ್ತಿತ್ತು. ಹಾಲೂ ಕುಡಿಯುತ್ತಿರಲಿಲ್ಲ.
ಹೀಗಾಗಿ ನಾವು ಮೆದುಳಿನಲ್ಲಿ ಏನಾದರೂ ರಕ್ತ ಹೆಪ್ಪುಗಟ್ಟಿದೆಯೇ ಎಂದು ತಿಳಿಯಲು ಆಸ್ಪತ್ರೆಗೆ ದಾಖಲಿಸಿದ್ದೆವು. ಇಲ್ಲಿ ವೈದ್ಯರು ರಕ್ತ ಪರೀಕ್ಷೆ ಮಾಡಿ ಎಚ್ ಎಂಪಿವಿ ವೈರಸ್ ಎನ್ನುತ್ತಿದ್ದಾರೆ. ಆದರೆ ಇದು ನಿಜವಾಗಿಯೂ ಅದೇ ವೈರಸ್ ಎನ್ನುವುದು ಖಚಿತವಾಗಿಲ್ಲ. ನಾವು ಇನ್ನೊಂದು ಕಡೆ ವರದಿ ಕಳುಹಿಸಿ ಚೆಕ್ ಮಾಡುತ್ತಿದ್ದೇವೆ. ಅದಾದ ಬಳಿಕವಷ್ಟೇ ಗೊತ್ತಾಗಬೇಕು. ನನ್ನ ಮಗನ ಆರೋಗ್ಯ ಈಗ ಸುಧಾರಿಸುತ್ತಿದೆ ಎಂದು ಮಗುವಿನ ತಂದೆ ಹೇಳಿದ್ದಾರೆ.