ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಬಗ್ಗೆ ತಮಗೆ ಯಾವುದೇ ರೀತಿಯ ಸಾಫ್ಟ್ ಕಾರ್ನರ್ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಅಶ್ವತ್ಥನಾರಾಯಣ ಬಗ್ಗೆ ನನಗೆ ಮೃದು ಧೋರಣೆ ಇದೆ ಕೆಲವರು ಹೇಳಿದ್ದಾರೆ. ಅಂತಹ ಯಾವ ಮೃದು ನಿಲುವು ನನಗೆ ಇಲ್ಲ. ಬದಲಿಗೆ, ದಾಖಲೆ ಇಟ್ಟು ಮಾತನಾಡಿ ಎಂದು ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ ಎಂದರು.
ಸರ್ಟಿಫಿಕೇಟ್ ಕೊಡಿಸುವುದರಲ್ಲಿ ಅಶ್ವತ್ಥನಾರಾಯಣ ಅವರದ್ದು ಎತ್ತಿದ ಕೈ ಅನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಿಂದೆ ಅವರು ನರ್ಸುಗಳಿಗೆ ಸರ್ಟಿಫಿಕೇಟ್ ಕೊಡಿಸಿ ಹೆಸರುವಾಸಿ ಆಗಿದ್ದರು. ಪರೀಕ್ಷೆ ಬರೆಯದೇ ಇದ್ದವರಿಗೂ ಕೊಟ್ಟಿದ್ದರು. ಕಾಂಗ್ರೆಸ್ ನವರು ಅದನ್ನಾದರೂ ಹೇಳಲಿ. ಅದಕ್ಕೆ ದಾಖಲೆ ಇಟ್ಟುಕೊಂಡು ಮಾತನಾಡಲು ಎಂದು ನಾನು ಹೇಳಿದ್ದು ಎಂದು ಕುಮಾರಸ್ವಾಮಿ ಹೇಳಿದರು.
ಈ ಸರಕಾರ ಎಲ್ಲಕ್ಕೂ ಮೌನವಾಗಿದೆ. ಪ್ರತಿ ಹಗರಣದ ಬಗ್ಗೆ ಕೂಡ ಮೌನವಾಗಿದೆ. ಕಳೆದ ಎರಡು ತಿಂಗಳಿಂದ ನಡೆದ ಗಲಾಟೆ, ಗಲಭೆಗಳು ನಡೆದಾಗಲೂ ಸರಕಾರ ಸುಮ್ಮನೆ ಇತ್ತು. ಎಲ್ಲಕ್ಕೂ ಮೌನಂ ಸಮ್ಮತಿ ಲಕ್ಷಣಂ ಅನ್ನುವಂತ ಪರಿಸ್ಥಿತಿ ಇದೆ. ಇದು ರಾಜ್ಯ ಹಣೆಬರಹ ಎಂದು ಅವರು ಕಿಡಿಕಾರಿದರು.
ಎರಡೂ ರಾಷ್ಟ್ರೀಯ ಪಕ್ಷಗಳ ನಡವಳಿಕೆಯನ್ನು ಜನ ನೋಡ್ತಾ ಇದ್ದಾರೆ. ರಾಜ್ಯದಲ್ಲಿ ಉತ್ತಮ ಸರ್ಕಾರ ಆಡಳಿತಕ್ಕೆ ಬರಬೇಕು. ಎರಡೂ ಪಕ್ಷಗಳ ನಾಯಕರು ನಾಡಿನ ಜನತೆಯ ಜೊತೆ ಚೆಲ್ಲಾಟ ಆಡ್ತಾ ಇದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಒಂದು ಸಣ್ಣ ಪ್ರಕರಣದ ಬಗ್ಗೆ ಯಾರೋ ಕೆಲವರು ಮಾತನಾಡುತ್ತಿದ್ದಾರೆ. 20 ಲಕ್ಷ ರೂಪಾಯಿ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಕೆಪಿಎಸ್ಸಿ ಶುದ್ಧ ಮಾಡ್ತೀವಿ ಅಂತ ಹೊರಟರು. ಆದರೆ, ಶ್ಯಾಮ್ ಭಟ್ಟರನ್ನು ತಂದು ಅಲ್ಲಿ ಕೂರಿಸಿದ ಮೇಲೆ ಅಲ್ಲಿ ಉದ್ಯೋಗದ ಮುಕ್ತ ಮಾರುಕಟ್ಟೆ ಶುರು ಆಯಿತು. ಎಸಿ ಹುದ್ದೆಗೆ ಇಷ್ಟು, ಡಿವೈಎಸ್ ಪಿ ಹುದ್ದೆಗೆ ಇಷ್ಟು ಅಂತ ವ್ಯಾಪಾರ ನಡೆಯಿತು ಎಂದು ಕುಮಾರಸ್ವಾಮಿ ಅವರು ಹೇಳಿದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ಯಾವ ನೈತಿಕತೆ ಇದೆ? ಭ್ರಷ್ಟಾಚಾರ ಮತ್ತು ಕಮಿಷನ್ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ತಮಗೆ ಬೇಕಾದವರನ್ನು ಕೆಪಿಎಸ್ ಸಿ ಸದಸ್ಯರನ್ನಾಗಿ ಮಾಡಿಕೊಂಡು ಅಮಾಯಕರ ಬಳಿ ಹಣ ಪೀಕಿಸುತ್ತಿದ್ದರು. ಹಾಗೆ ವಂಚನೆಗೆ ಒಳಗಾದ ಎಷ್ಟೋ ಜನ ನನ್ನ ಬಳಿ ಬಂದಿದ್ದಾರೆ. ಕಾಂಗ್ರೆಸ್ ಸರಕಾರ ಮಾಡಿದ್ದನ್ನೇ ಬಿಜೆಪಿ ಸರಕಾರವು ಮುಂದುವರೆಸಿಕೊಂಡು ಹೋಗುತ್ತಿದೆ ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.
ನಾನು ಮುಖ್ಯಮಂತ್ರಿ ಆಗಿದ್ದಾಗ ಇವರ ಆಟಕ್ಕೆ ಅವಕಾಶ ಇರಲಿಲ್ಲ. ತಮಗೆ ಬೇಕಾದವರನ್ನು ಕೆಪಿಎಸ್ಸಿ ಸದಸ್ಯರನ್ನಾಗಿ ನೇಮಕ ಮಾಡುವ ಬಗ್ಗೆ ನನ್ನ ಮೇಲೂ ಸಿದ್ದರಾಮಯ್ಯ ಒತ್ತಡ ಹಾಕಿದ್ದರು. ಆದರೆ, ಅವರು ಶಿಫಾರಸು ಮಾಡಿದ ವ್ಯಕ್ತಿಯ ಬಗ್ಗೆ ನನಗೆ ಮಾಹಿತಿ ಇದ್ದ ಕಾರಣಕ್ಕೆ ನಾನು ಆ ವ್ಯಕ್ತಿಯನ್ನು ಕೆಪಿಎಸ್ಸಿಗೆ ನೇಮಕ ಮಾಡಲಿಲ್ಲ ಎಂದು ಕುಮಾರಸ್ವಾಮಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಗ್ಗೆ ಸ್ಫೋಟಕ ಮಾಹಿತಿಯನ್ನು ಹೊರಗೆಡವಿದರು.
ಹೀಗೆ ಹಣ ಕೊಟ್ಟು ಬಂದವರು ಸರಿಯಾಗಿ ಕೆಲಸ ಮಾಡುವುದಿಲ್ಲ. ಅವರೆಲ್ಲ ನ್ಯಾಯಯುತವಾಗಿ ಜನರ ಸೇವೆ ಮಾಡಲ್ಲ. ಬಡವರ ಹೊಟ್ಟೆ ಮೇಲೆ ಹೊಡೆಯುತ್ತಾರೆ. ಇದನ್ನು ಜನ ಅರಿತುಕೊಳ್ಳಬೇಕು ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ಈ ಹಿಂದೆ ಹಲವಾರು ಹಗರಣಗಳು ಹೊರ ಬಂದವು. ಅವೆಲ್ಲ ಈಗ ಏನಾಗಿವೆ? ನಾನೇ ಹಲವಾರು ಹಗರಣಗಳ ಬಗ್ಗೆ ದಾಖಲೆ ಸಮೇತ ಜನರ ಮುಂದೆ ಇಟ್ಟಿದ್ದೆ. ಆದರ ಪ್ರತಿಫಲ ಏನಾಯಿತು? ಈ ನಾಡಿನಿಂದ ಎರಡು ರಾಷ್ಟ್ರೀಯ ಪಕ್ಷಗಳನ್ನು ಹೊರಗಿಡಿ ಎಂದು ಅವರು ಜನರನ್ನು ಕೋರಿದರು.
ಡ್ರಗ್ಸ್ ಕೇಸ್ ನಡೆದಾಗ ಮಾಜಿ ಸಿಎಂ ಇದ್ದಾರೆ ಅಂತ ತೇಲಿಬಿಟ್ಟರು. ಆ ಮಾಜಿ ಸಿಎಂ ಯಾರು ಎಂದು ನಾನು ಕೇಳಿದೆ. ಅವರು ಯಾರೆಂದು ಹೇಳಲೇ ಇಲ್ಲ. ಆ ಪ್ರಕರಣವೂ ಹಳ್ಳ ಹಿಡಿಯಿತು. ಆಮೇಲೆ ಲಾಟರಿ ಕೇಸ್ ಏನ್ ಆಯಿತು ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಯಾವ ಕೇಸ್ ಗಳಿಗೂ ತಾರ್ಕಿಕ ಅಂತ್ಯ ಕಾಣಿಸುತ್ತಿಲ್ಲ. ಪಿಎಸ್ಐ ಕೇಸ್ ಅನ್ನು ಕೂಡ ಹಾಗೆಯೇ ಮುಚ್ಚಿ ಹಾಕುತ್ತಾರೆ ಎಂದು ಕುಮಾರಸ್ವಾಮಿ ಗುಡುಗಿದರು.
ಹದಿನೈದು ದಿನ ಪಿಎಸ್ಐ ಹಗರಣ ಭಾರೀ ಪ್ರಚಾರದಲ್ಲಿ ಇರುತ್ತದೆ. ಆಮೇಲೆ ಗುಂಡಿ ತೋಡಿ ಮುಚ್ಚಿ ಹಾಕುತ್ತಾರೆ. ಉದಾಹರಣೆಗೆ, ಕಾಂಗ್ರೆಸ್ ಅವಧಿಯಲ್ಲಿ ಪಿಯುಸಿ ಪ್ರಶ್ನೆ ಪತ್ರಿಕೆ ಲೀಕ್ ಆಗಿತ್ತು. ಅಗ ಶಿವಕುಮಾರ್ ಅನ್ನುವ ವ್ಯಕ್ತಿಯನ್ನು ಬಂಧಿಸಲಾಯಿತು. ಆಮೇಲೆ ಆ ಪ್ರಕರಣ ಏನಾಯಿತು ಎನ್ನುವುದು ರಾಜ್ಯಕ್ಕೆ ಗೊತ್ತಿದೆ ಎಂದು ಅವರು ಟೀಕಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಹಾಕಿಕೊಟ್ಟ ಭ್ರಷ್ಟಾಚಾರದ ಅಡಿಪಾಯ ಇಂದು ಬೃಹತ್ ಆಗಿ ಬೆಳೆದು ನಿಂತಿದ್ದು, ಅದನ್ನು ಬಿಜೆಪಿ ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.