ಬೆಂಗಳೂರು: ರಾಜ್ಯದಲ್ಲಿ ಕುಸ್ತಿ ಕದನದ ನಡುವೆ ಮತ್ತೊಂದು ಬೆಲೆ ಏರಿಕೆಗೆ ರಾಜ್ಯ ಸರ್ಕಾರ ಸಿದ್ಧವಾಯ್ತಾ ಎಂದು ಅನುಮಾನ ಮೂಡಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಏಪ್ರಿಲ್ ಗೆ ಮತ್ತೆ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಕಾವೇರಿ ನೀರಿನ ದರ ಏರಿಕೆಗೆ ಚಿಂತನೆ ನಡೆಸಿದೆ ಎಂದು ಮಾಧ್ಯಮ ವರದಿಗಳ ಬಗ್ಗೆ ರಾಜ್ಯ ಬಿಜೆಪಿ ಪ್ರತಿಕ್ರಿಯಿಸಿದೆ. ಇದು ರಾಜ್ಯ ಸರ್ಕಾರದಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುವ ಯೋಜನೆ ಎಂದು ವಾಗ್ದಾಳಿ ನಡೆಸಿದೆ.
ರಾಜ್ಯದ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಮೇಲೆ ತನ್ನ ಬೆಲೆ ಏರಿಕೆ ಅಸ್ತ್ರವನ್ನು ಮತ್ತೆ ಹೂಡಲು ಆರಂಭಿಸಿದೆ. ಈಗಾಗಲೇ ಪೆಟ್ರೋಲ್, ಡಿಸೇಲ್, ಬಸ್, ಮೆಟ್ರೋ, ಹಾಲು, ವಿದ್ಯುತ್, ತುಪ್ಪದ ದರ ಏರಿಕೆಯಿಂದ ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಗಿದೆ.
ಇದೇ ರೀತಿ ಬೆಲೆ ಏರಿಕೆಯನ್ನು ಸರಣೀ ರೂಪದಲ್ಲಿ ಮುಂದುವರಿಸಿದಲ್ಲಿ ಸದ್ಯದಲ್ಲೇ ಸಿದ್ದರಾಮಯ್ಯನವರ ದುರಾಡಳಿತದ ವಿರುದ್ಧ ಜನರು ಬೀದಿಗಿಳಿದು ಈ ಸರ್ಕಾರವನ್ನು ಪತನಗೊಳಿಸುವುದು ಗ್ಯಾರಂಟಿ ಎಂದು ಕಿಡಿ ಕಾರಿದೆ.