ಬೆಂಗಳೂರು: ಬಹಳ ದೊಡ್ಡವರಾಗಿರುವ ಎಚ್ ಡಿ ಕುಮಾರಸ್ವಾಮಿ ಅವರು ಯಾರಾ ಬೆಂಬಲವನ್ನು ಪಡೆಯುವುದಿಲ್ಲ. ಅವರು ಒಕ್ಕಲಿಗರ ಮಠ, ಒಕ್ಕಲಿಗರ ಸಂಘ, ಒಕ್ಕಲಿಗ ಜಾತಿಯನ್ನು ಎಂದೂ ಉಪಯೋಗಿಸಿಕೊಂಡಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯ ಮಾಡಿದ್ದಾರೆ.
ಮಾಧ್ಯಮಗಳು ನಿಮ್ಮ ಪರವಾಗಿ ಸ್ವಾಮೀಜಿಗಳು ಧ್ವನಿ ಎತ್ತಿರುವುದಕ್ಕೆ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಒಕ್ಕಲಿಗ ಮಠದ ಹಿರಿಯ ಸ್ವಾಮೀಜಿಗಳು ಇಲ್ಲದಿದ್ದರೆ ದೇವೇಗೌಡರು ಸಿಎಂ ಆಗುತ್ತಿದ್ದರೆ ಎಂದು ಪ್ರಶ್ನೆ ಹಾಕಿದ್ದಾರೆ.
ಪಾಪ, ಕುಮಾರಣ್ಣನಿಗೆ ಒಕ್ಕಲಿಗರ ಎರಡನೇ ಮಠ ಹೇಗಾಯಿತು ಎಂಬುದು ಗೊತ್ತಿಲ್ಲವೇ? ಅದನ್ನು ಕಟ್ಟಿದವರು ಯಾರು?ದೇವೇಗೌಡರ ಪರ ಸ್ವಾಮೀಜಿಗಳು ರಸ್ತೆಗೆ ಇಳಿಯಲಿಲ್ಲವೇ? ಸದಾನಂದ ಗೌಡರಿಗೆ ತೊಂದರೆ ಆದಾಗ ಸ್ವಾಮೀಜಿಗಳು ಸುಮ್ಮನೆ ಕೂತಿದ್ದರಾ? ಕೆಲವು ಸಂದರ್ಭದಲ್ಲಿ ಸ್ವಾಮೀಜಿಗಳು ಮಾತನಾಡುತ್ತಾರೆ. ಅದರಲ್ಲಿ ತಪ್ಪೇನಿದೆ? ಬೇರೆ ಸಂದರ್ಭದಲ್ಲಿ ಸ್ವಾಮೀಜಿಗಳು ಮಾತನಾಡಿದಾಗ ನಾನು ಬೇಸರ ಮಾಡಿಕೊಂಡಿದ್ದೇನಾ ಎಂದು ಮರು ಪ್ರಶ್ನೆ ಮಾಡಿದರು.
ಈ ಸಂದರ್ಭದಲ್ಲಿ ನಾನು ಸ್ವಾಮೀಜಿಗಳ ಬೆಂಬಲವನ್ನು ಕೋರಲಿಲ್ಲ. ಅವರೇ ನನ್ನ ಮೇಲಿನ ಪ್ರೀತಿತಿಂದ ಮಾತನಾಡಿದ್ದಾರೆ ಎಂದರು.
ಒಂದು ಸಮುದಾಯದಲ್ಲಿ ಹುಟ್ಟಿರುವ ನಾನು ಎಲ್ಲ ಸಮುದಾಯಗಳನ್ನು ಪ್ರೀತಿ, ಗೌರವದಿಂದ ಕಾಣುತ್ತೇನೆ. ಬಾಳೆಹೊನ್ನೂರು ಸ್ವಾಮಿಜಿ, ಶ್ರೀಶೈಲ ಸ್ವಾಮೀಜಿ ಸೇರಿದಂತೆ ಸಾಕಷ್ಟು ಸ್ವಾಮೀಜಿಗಳು ನನ್ನ ಪರ ಮಾತನಾಡಿದ್ದಾರೆ. ನನ್ನ ಮೇಲೆ ಅವರಿಗೆ ಪ್ರೀತಿ, ವಿಶ್ವಾಸ ಇದೆ. ಹೀಗಾಗಿ ಮಾತನಾಡಿದ್ದಾರೆ. ಇನ್ನೂ ಜೈನ ಸ್ವಾಮೀಜಿಗಳು ಕೂಡ ದೊಡ್ಡ ಸಮಾವೇಶದಲ್ಲಿ ಬಹಿರಂಗವಾಗಿ ಆಶೀರ್ವಾದ ಮಾಡಿದರು ಎಂದರು.