ಬೆಂಗಳೂರು: ನನ್ನ ಮತ್ತು ಸಿಎಂ ನಡುವೆ ಭಿನ್ನಾಭಿಪ್ರಾಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮತ್ತೆ ಮತ್ತೆ ಹೇಳುತ್ತಿದ್ದಾರೆ. ಆದರೆ ಕತೆ ಬೇರೆಯೇ ಇದೆ ಎನ್ನುತ್ತಿದೆ ಕೆಲವು ವರದಿಗಳು.
ಡಿಕೆ ಶಿವಕುಮಾರ್ ಪಕ್ಷ ನಿಷ್ಠೆ ಬಗ್ಗೆ ಯಾರೂ ಚಕಾರವೆತ್ತುವಂತಿಲ್ಲ. ತಮಗೆ ಬೇಕಾದ ಸ್ಥಾನ ಸಿಗದೇ ಇದ್ದಾಗ ಯಾವುದೇ ರಾಜಕಾರಣಿಯಾದರೂ ಸಿಡಿದೇಳುವುದು ಸಾಮಾನ್ಯ. ಆದರೆ ಡಿಕೆಶಿ ಇದುವರೆಗೆ ಒಂದೇ ಒಂದು ಬಹಿರಂಗ ಹೇಳಿಕೆ ಕೊಡದೇ ಶಹಬ್ಬಾಶ್ ಎನ್ನುವಂತೆ ವರ್ತಿಸಿದ್ದಾರೆ.
ಇದೀಗ ಸಿಎಂ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿ ಎಲ್ಲವೂ ಸರಿಯಿದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಆದರೆ ತೆರೆಮರೆಯಲ್ಲಿ ಸಿಎಂ ಕುರ್ಚಿ ಕಸರತ್ತಿಗೆ ತಾತ್ಕಾಲಿಕ ಬ್ರೇಕ್ ಅಷ್ಟೇ ಬಿದ್ದಿದೆ ಎನ್ನುತ್ತಿದೆ ಕೆಲವು ಮೂಲಗಳು.
ಇದೀಗ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಅಧಿವೇಶನವಿರುವುದರಿಂದ ಕುರ್ಚಿ ಫೈಟ್ ಗೆ ತಾತ್ಕಾಲಿಕ ಬ್ರೇಕ್ ಸಿಕ್ಕಿದೆ. ಆದರೆ ಅಧಿವೇಶನ ಮುಗಿದ ಬಳಿಕ ಮತ್ತೆ ಈ ವಿಚಾರ ಚರ್ಚೆಯಾಗಲಿದೆ. ಸ್ವತಃ ಸೋನಿಯಾ ಗಾಂಧಿ ನೇತೃತ್ವದಲ್ಲೇ ಸಭೆ ನಡೆದು ತೀರ್ಮಾನವಾಗಲಿದೆ ಎನ್ನಲಾಗುತ್ತಿದೆ. ಹೀಗಾಗಿ ರಾಜ್ಯದ ಕುರ್ಚಿ ಕದನಕ್ಕೆ ಬ್ರೇಕ್ ಬಿದ್ದಿರುವುದು ತಾತ್ಕಾಲಿಕವಾಗಿಯಷ್ಟೇ ಎನ್ನಲಾಗುತ್ತಿದೆ.