Publish Date: Sun, 30 Nov 2025 (19:24 IST)
Updated Date: Sun, 30 Nov 2025 (19:27 IST)
ಬೀದರ್: ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಧ್ಯೆ ತೀವ್ರ ಪೈಪೋಟಿಯಿರುವಾಗ, ನನಗೆ ಆಗಬೇಕೆಂಬ ಆಸಕ್ತಿ ನನಗಿಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ನಗರದ ಗಣೇಶ್ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಮರಾಠಾ ಸ್ವಾಭಿಮಾನಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಾಲ್ಕು ಸಲ ಶಾಸಕನಾಗಿ, ಮೂರು ಸಲ ಸಚಿವನಾಗಿ ಕೆಲಸ ಮಾಡಿದ್ದೇನೆ. ರಾಜಕಾರಣ ಮಾಡದಿದ್ದರೂ ನಾನು ಆರಾಮಾಗಿ ಇರಬಹುದು. ಕಷ್ಟದಲ್ಲಿರುವ ಮರಾಠಾ ಸಮಾಜವನ್ನು ಮೇಲೆತ್ತುವ ಕೆಲಸವಾಗಬೇಕಿದೆ. ಈ ಕಾರ್ಯಕ್ರಮದ ಉದ್ದೇಶವು ಅದೇ ಆಗಿದೆ ಎಂದರು.
ಮರಾಠಾ ಸಮಾಜವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಏಳಿಗೆ ಹೊಂದಬೇಕು. ಈ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದರೆ ರಾಜಕೀಯವಾಗಿ ಮೇಲೆ ಬರಬಹುದು. ಜೀಜಾಮಾತಾ ಹೆಸರಿನಲ್ಲಿ ತಕ್ಷಣವೇ ಒಂದು ಟ್ರಸ್ಟ್ ಸ್ಥಾಪಿಸಿ, ನೋಂದಣಿ ಪ್ರಕ್ರಿಯೆ ಆರಂಭಿಸಬೇಕೆಂದರು. ಇದಕ್ಕೆ ನನ್ನ ಫೌಂಡೇಶನ್‌ನಿಂದ ಎಲ್ಲ ರೀತಿಯ ಅಗತ್ಯ ನೆರವು ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಮುಖಂಡ ಪದ್ಮಾಕರ್ ಪಾಟೀಲ್, ಸಂತೋಷ್ ಲಾಡ್ ನಮ್ಮ ಸಮಾಜದ ದೊಡ್ಡ ಆಸ್ತಿ. ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದರು.