ಮೈಸೂರು: ಬಿಜೆಪಿ ಮಾಜಿ ಸಂಸದ ಪ್ರತಾಪಸಿಂಹ ವಿರುದ್ಧ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪೊಲೀಸ್ ಠಾಣೆ ಮೇಲಿನ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಅವರ ವಿರುದ್ಧ ಕೇಸ್ ದಾಖಲಾಗಿದೆ. ಪ್ರತಾಪಸಿಂಹ ವಿರುದ್ಧ ಯುವ ಕಾಂಗ್ರೆಸ್ ಮುಖಂಡ ಸೈಯದ್ ಅಬ್ರರ್ ದೂರು ನೀಡಿದ್ದರು.
ಮೈಸೂರು ಉದಯಗಿರಿ ಪೊಲೀಸ್ ಠಾಣೆ ಮೇಲೆ ಫೆ.10ರಂದು ಮುಸ್ಲಿಂ ಯುವಕರ ಗುಂಪು ದಾಂಧಲೆ ನಡೆಸಿತ್ತು. ಈ ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡುವಾಗ ಪ್ರತಾಪ್ ಸಿಂಹ ಅವರು ಮುಸ್ಲಿಮರ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
ಠಾಣೆ ಮೇಲಿನ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಪ್ರತಾಪ್ ಸಿಂಹ, ದೇಶ ಇಬ್ಭಾಗವಾದಾಗಲೇ ಮುಸ್ಲಿಮರು ಈ ದೇಶ ಬಿಟ್ಟು ತೊಲಗಿಬಿಡಬೇಕಿತ್ತು. ಇಲ್ಲಿ ಉಳಿದುಕೊಂಡವರು ಮಕ್ಕಳನ್ನು ಹುಟ್ಟಿಸುವುದು ಬಿಟ್ಟು ಬೇರೇನು ಮಾಡುತ್ತಿದ್ದಾರೆ ಹೇಳಿ? ಎಂದು ನಾಲಗೆ ಹರಿಬಿಟ್ಟಿದ್ದರು.