ಕೃಪಾ ಸಾಗರ್ ನಿರ್ದೇಶನದ ಸಾರ್ವಜನಿಕರಲ್ಲಿ ವಿನಂತಿ ಚಿತ್ರ ಇದೇ 21ರಂದು ರಾಜ್ಯಾಧ್ಯಂತ ತೆರೆ ಕಾಣುತ್ತಿದೆ. ಟೀಸರ್ ಮತ್ತು ಟ್ರೈಲರ್ಗಳ ಮೂಲಕವೇ ಎಲ್ಲ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಂಡಿರೋ ಈ ಚಿತ್ರದ ತುಂಬಾ ಹೊಸಬರೇ ತುಂಬಿದ್ದಾರೆ. ಅವರೆಲ್ಲರ ಪಾಲಿಗಿದು ಅದೃಷ್ಟ ಪರೀಕ್ಷೆ. ಆದ್ದರಿಂದಲೇ ಎಲ್ಲರೂ ಶಕ್ತಿ ಮೀರಿ ಶ್ರಮ ಹಾಕಿ ಈ ಸಿನಿಮಾವನ್ನು ರೂಪಿಸಿದ್ದಾರೆ.
ಈ ಚಿತ್ರದ ಮೂಲಕವೇ ಮದನ್ ರಾಜ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಒಂದೆರಡು ಚಿತ್ರಗಳಲ್ಲಿ ನಟಿಸಿರುವ ಮದನ್ ರಾಜ್ ಪಾಲಿಗೆ ಈ ಸಿನಿಮಾ ಒಂದು ಸರ್ಪ್ರೈಸ್. ಯಾಕೆಂದರೆ ಕಡೇತನಕ ತಾವು ಹೀರೋ ಆಗುತ್ತಿರೋ ವಿಚಾರವೇ ಅವರಿಗೆ ಗೊತ್ತಿರಲಿಲ್ಲವಂತೆ. ಹೀಗೆ ಬಯಸದೇ ಬಂದ ಭಾಗ್ಯದಂಥಾ ಅವಕಾಶವನ್ನು ತನ್ನದಾಗಿಸಿಕೊಂಡಿರೋ ಮದನ್ ತಮಗೆ ಸಿಕ್ಕಿರುವ ಪಾತ್ರದ ಬಗೆಗಿನ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ.
ಯಾವುದೇ ಚಿತ್ರದ ಹೀರೋ ಅಂದ ಮೇಲೆ ಬಿಲ್ಡಪ್ಪುಗಳ ಹಿಮ್ಮೇಳದಲ್ಲಿ ಮಿರುಗೋ ಚಿತ್ರಣ ಕಣ್ಮುಂದೆ ಬರುತ್ತದೆ. ಆದರೆ ಇಲ್ಲಿ ಹೀರೋ ಪಾತ್ರ ನೋಡುಗರ ನಡುವಿನದ್ದೇ ಒಂದು ಕ್ಯಾರೆಕ್ಟರಿನಂತೆ ಕಾಣಿಸುತ್ತದೆಯಂತೆ. ಇನ್ನುಳಿದಂತೆ ಹೀರೋ ಅಂದ್ರೆ ಫುಲ್ ಪಾಸಿಟಿವ್ ಕ್ಯಾರೆಕ್ಟರೇ ಆಗಿರಬೇಕೆಂಬ ಸಿದ್ಧ ಸೂತ್ರವಿದೆ. ಆದರೆ ಇಲ್ಲಿ ನಾಯಕನಾಗಿ ಮದನ್ ಪಾತ್ರಕ್ಕೆ ವಿಲನ್ ಶೇಡ್ ಕೂಡಾ ಇದೆಯಂತೆ.
ಮದನ್ ರಾಜ್ ಶಾಲಾ ಕಾಲೇಜು ದಿನಗಳಲ್ಲಿಯೇ ನಟನೆಯ ಗುಂಗು ಹತ್ತಿಸಿಕೊಂಡು ರಂಗಭೂಮಿಯ ನಂಟು ಬೆಳೆಸಿಕೊಂಡಿರುವವರು. ಈ ವರೆಗೂ ಅವರು ಸಾಕಷ್ಟು ನಾಟಕಗಳಲ್ಲಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ರಂಗಭೂಮಿಯ ಸಾಹಚರ್ಯದಲ್ಲಿಯೇ ನಟನಾಗಿ ರೂಪುಗೊಂಡಿದ್ದಾರೆ.