ಕೃಪಾ ಸಾಗರ್ ನಿರ್ದೇಶನದ ಸಾರ್ವಜನಿಕರಲ್ಲಿ ವಿನಂತಿ ಚಿತ್ರ ಭರಪೂರ ನಿರೀಕ್ಷೆಗಳ ಒಡ್ಡೋಲಗದಲ್ಲಿ ಈ ವಾರ ತೆರೆ ಕಾಣಲು ಸಜ್ಜಾಗಿದೆ. ಮದನ್ ರಾಜ್ ಮತ್ತು ಅಮೃತಾ ನಾಯಕ ನಾಯಕಿಯರಾಗಿರೋ ಈ ಚಿತ್ರ ವಿಶಿಷ್ಟವಾದ ಕ್ರೈಂ ಥ್ರಿಲ್ಲರ್ ಕಥೆ ಹೊಂದಿದೆ ಅನ್ನೋದೂ ಈಗಾಗಲೇ ಜಾಹೀರಾಗಿದೆ. ಈ ಚಿತ್ರವನ್ನು ಸಾರ್ವಜನಿಕರ ರಕ್ಷಣೆಗೆ ಸದಾ ಟೊಂಕ ಕಟ್ಟಿ ನಿಂತಿರುವ ಆರಕ್ಷಕರಿಗೆ ಅರ್ಪಿಸುವ ಮೂಲಕವೂ ಚಿತ್ರತಂಡ ಗಮನ ಸೆಳೆದಿದೆ.
ನಮ್ಮ ನಡುವೆ ಚಿತ್ರವಿಚಿತ್ರವಾದ ಕ್ರೈಂಗಳು ನಡೆಯುತ್ತಿರುತ್ತವೆ. ಆದರೂ ಜನಸಾಮಾನ್ಯರ ಕಣ್ಣಲ್ಲಿ ಕೆಲವೇ ಕೆಲ ಪ್ರಕರಣಗಳು ಮಾತ್ರವೇ ಅಪರಾಧ ಎಂಬಂಥಾ ಛಾಯೆಯಿದೆ. ಈ ಕಾರಣದಿಂದಲೇ ಬೆನ್ನ ಹಿಂದೆ ನಡೆಯ ಬಹುದಾದ ಅಪರಾಧ ಪ್ರಕರಣಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸೋದೂ ಪೊಲೀಸ್ ಇಲಾಖೆಗೆ ಸವಾಲಾಗಿದೆ. ಈ ಚಿತ್ರದಲ್ಲಿನ ಅಂಶಗಳು ಜನಸಾಮಾನ್ಯರಲ್ಲಿ ಅರಿವು ಮೂಡಿಸಿ ಸದಾ ಅಲರ್ಟ್ ಆಗಿಡುವ ಮೂಲಕ ಪೊಲೀಸರ ಭಾರವನ್ನು ಕಡಿಮೆ ಮಾಡುವಂತಿದೆಯಂತೆ.
ಈ ಚಿತ್ರದಲ್ಲಿಯೂ ಪೊಲೀಸರನ್ನು ಹೀರೋಗಳಾಗಿಯೇ ಬಿಂಬಿಸಲಾಗಿದೆ. ಇಡೀ ಕಥೆಯಲ್ಲಿ ಪೊಲೀಸ್ ಪಾತ್ರಗಳಿಗೊಂದು ಪ್ರಾಧಾನ್ಯತೆ ಇದೆ. ಈ ಕಾರಣದಿಂದಲೇ ಈ ಚಿತ್ರವನ್ನು ಪೊಲೀಸರಿಗೆ ಅರ್ಪಿಸಲಾಗಿದೆ ಎಂಬ ಮಾಹಿತಿ ಚಿತ್ರತಂಡದ ಕಡೆಯಿಂದ ಹೊರ ಬಿದ್ದಿದೆ. ಆದರೆ ಅದಕ್ಕೆ ಬೇರೊಂದು ಕಾರಣವೂ ಇದೆ. ಅದೇನೆಂಬುದನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ. ಆ ಗುಟ್ಟೂ ಸೇರಿದಂತೆ ಒಂದಿಡೀ ಚಿತ್ರವನ್ನು ಆಸ್ವಾದಿಸೋ ಕ್ಷಣಗಳು ಹತ್ತಿರಾಗುತ್ತಿವೆ.