ಒಂದು ಚಿತ್ರವನ್ನು ರೂಪಿಸೋದು ಎಷ್ಟು ಕಷ್ಟದ ಸಂಗತಿ ಅನ್ನೋದು ಅದರಲ್ಲಿ ಅನುಭವ ಹೊಂದಿರುವವರಿಗೆ ಮಾತ್ರವೇ ಗೊತ್ತಾಗಬಹುದಾದ ಸಂಗತಿ. ಹಾಗೆ ಒಂದು ಪರಿಪೂರ್ಣವಾದ ದೃಶ್ಯ ಜಗತ್ತನ್ನು ಒಂದೆರಡು ಘಂಟೆಗಳಲ್ಲಿ ಕಟ್ಟಿ ಕೊಡಬೇಕೆಂದರೆ ಇಡೀ ತಂಡ ವರ್ಷಾಂತರಗಳ ಕಾಲ ಹಗಲೂ ರಾತ್ರಿಯೆನ್ನದೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಯಶಸ್ವೀ ಚಿತ್ರವೊಂದು ಎಂತೆಂಥಾ ಶ್ರಮ ಬೇಡುತ್ತದೋ ಅಂಥ ಎಲ್ಲವೂ ಒಗ್ಗೂಡಿಕೊಂಡು ರೂಪಿಸಲ್ಪಟ್ಟಿರುವ ಚಿತ್ರ `ಸಾರ್ವಜನಿಕರಲ್ಲಿ ವಿನಂತಿ’.
ಇದು ಕೃಪಾ ಸಾಗರ್ ಅವರ ಮೊದಲ ಪ್ರಯತ್ನ. ಬೇರೆಲ್ಲ ವಿಚಾರಗಳನ್ನು ಬದಿಗಿಟ್ಟು ನೋಡಿದರೂ ಬರೀ ಕಥೆ ರೂಪಿಸಲು ನಿರ್ದೇಶಕರು ಪಟ್ಟಿರುವ ಶ್ರಮವಿಲ್ಲಿ ದಾಖಲಿಸಲೇ ಬೇಕಾದಂಥಾದ್ದು. ಇದು ನಮ್ಮ ನಿಮ್ಮ ನಡುವೆ ನಡೆದರೂ ಹೆಚ್ಚಾಗಿ ಗಮನಕ್ಕೆ ಬಾರದ ಅತ್ಯಂತ ವಿರಳ ಅಪರಾಧ ಪ್ರಕರಣಗಳನ್ನು ಬೇಸ್ ಆಗಿಸಿಕೊಂಡಿರೋ ಚಿತ್ರ. ಹಾಗೆಂದ ಮೇಲೆ ಫೀಲ್ಡಿಗಿಳಿದು ತಲಾಶು ಮಾಡದೇ ಹೋದರೆ ಖಂಡಿತವಾಗಿಯೂ ರುಚಿಕಟ್ಟಾದ ಕಥೆಯೊಂದನ್ನು ಸಿದ್ಧಪಡಿಸಲು ಸಾಧ್ಯವೇ ಇಲ್ಲ.
ಇದನ್ನು ಅರಿವಾಗಿಸಿಕೊಂಡಿದ್ದ ಕೃಪಾ ಸಾಗರ್ ವರ್ಷಗಟ್ಟಲೆ ಕಥಾ ಎಳೆಯ ಬೆಂಬಿದ್ದು ಅಲೆದಿದ್ದಾರೆ. ಹಲವು ಮೂಲಗಳಿಂದ ಸಮಗ್ರವಾದ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಈ ಮೂಲಕವೇ ಗಟ್ಟಿಯಾದ ಕಥೆಯೊಂದನ್ನು ಸಿದ್ಧಪಡಿಸಿದ್ದಾರೆ. ಇದೆಲ್ಲವನ್ನೂ ಮಾಡಿ ಸಾರ್ವಜನಿಕರಲ್ಲಿ ವಿನಂತಿ ಚಿತ್ರವನ್ನು ಬಿಡುಗಡೆಯ ಹೊಸ್ತಿಲಿಗೆ ತಂದು ನಿಲ್ಲಿಸಲು ಭರ್ತಿ ಎರಡು ವರ್ಷ ಬೇಕಾಗಿದೆ. ಇಂಥಾ ಶ್ರದ್ಧೆಯ ಕಾರಣದಿಂದಲೇ ಈಗಾಗಲೇ ಭರ್ಜರಿ ಹವಾ ಸೃಷ್ಟಿಸಿರೋ ಈ ಚಿತ್ರ ಈ ವಾರ ರಾಜ್ಯಾಧ್ಯಂತ ಬಿಡುಗಡೆಯಾಗುತ್ತಿದೆ.