ಉಮಾ ನಂಜುಂಡರಾವ್ ನಿರ್ಮಾಣ ಮಾಡಿರುವ ಸಾರ್ವಜನಿಕರಲ್ಲಿ ವಿನಂತಿ ಚಿತ್ರ ಈ ವಾರ ರಾಜ್ಯಾಧ್ಯಂತ ತೆರೆ ಕಾಣುತ್ತಿದೆ. ಈ ಮೂಲಕವೇ ಪ್ರತಿಭಾವಂತ ಹೊಸಬರ ತಂಡವೊಂದು ಪ್ರೇಕ್ಷಕರೆದುರು ತೆರೆದುಕೊಳ್ಳೋ ಸಮಯವೂ ಸನ್ನಿಹಿತವಾಗಿದೆ. ಕೃಪಾ ಸಾಗರ್ ನಿರ್ದೇಶನದ ಈ ಚಿತ್ರ ಯಾವ ಸದ್ದೂ ಇಲ್ಲದೇ ಚಿತ್ರೀಕರಣ ನಡೆಸಿಕೊಂಡು ಬಿಡುಗಡೆಯ ಹೊಸ್ತಿಲಲ್ಲಿ ಸದ್ದು ಮಾಡಿದ ರೀತಿಯೇ ಪರಿಪೂರ್ಣ ಗೆಲುವು ದಕ್ಕುವ ಮುನ್ಸೂಚನೆಯಂತೆಯೂ ಕಾಣಿಸುತ್ತಿದೆ.
ಇಂಥಾ ಸಕಾರಾತ್ಮಕ ಪ್ರತಿಕ್ರಿಯೆಗಳಿಂದ ಇಡೀ ಚಿತ್ರತಂಡವೇ ಖುಷಿಯ ಮೂಡಿನಲ್ಲಿದೆ. ಇದರ ಭಾಗವಾದ ಪ್ರತಿಯೊಬ್ಬರಲ್ಲಿಯೂ ತಮ್ಮ ಕನಸಿನ ಹಾದಿಗೆ ಭರ್ಜರಿಯಾಗಿಯೇ ಶುಭಾರಂಭ ದೊರೆಯಲಿದೆ ಎಂಬ ನಿರೀಕ್ಷೆಯೂ ಇದ್ದೇ ಇದೆ. ಇಂಥಾದ್ದೊಂದು ಭರವಸೆ ತುಂಬಿದ ನಿರೀಕ್ಷೆ ನಿರ್ದೇಶಕ ಕೃಪಾ ಸಾಗರ್, ನಾಯಕ ಮದನ್ ರಾಜ್, ನಾಯಕಿ ಅಮೃತಾ ಸೇರಿದಂತೆ ಎಲ್ಲರಲ್ಲಿಯೂ ಇದೆ.
ಒಂದು ಕಾಲಕ್ಕೆ ಖಾಸಗೀ ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರು ಅಮೃತಾ. ಮೂಲತಃ ಮೈಸೂರಿನ ಹುಡುಗಿಯಾದ ಅಮೃತಾ ಪಾಲಿಗೆ ಪ್ರಧಾನ ಕನಸಾಗಿದ್ದದ್ದು ನಟನೆಯೇ. ಆದರೆ ಮಾಧ್ಯಮ ಲೋಕದ ಮೂಲಕ ಒಂದಷ್ಟು ಗುರುತಿಸಿಕೊಂಡ ಅವರು ಕೆಲ ಧಾರಾವಾಹಿಗಳಲ್ಲಿಯೂ ನಟಿಸಿದ್ದರು. ಅವರೀಗ ಸಾರ್ವಜನಿಕರಲ್ಲಿ ವಿನಂತಿ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿದ್ದಾರೆ.
ಈ ಮೊದಲ ಹೆಜ್ಜೆಯಲ್ಲಿಯೇ ಒಂದೊಳ್ಳೆ ಪಾತ್ರ ಸಿಕ್ಕಿದ ಖುಷಿ ಅಮೃತಾರಲ್ಲಿದೆ. ಇಲ್ಲಿ ಅವರ ಪಾತ್ರ ಸುಲಭಕ್ಕೆ ಊಹಿಸಲಾಗದಷ್ಟು ವಿಶಿಷ್ಟವಾಗಿದೆಯಂತೆ. ಈ ಪಾತ್ರವೇ ತನ್ನನ್ನು ನಾಯಕಿಯಾಗಿ ನೆಲೆಗೊಳಿಸುತ್ತದೆಯೆಂಬ ನಂಬಿಕೆ ಅಮೃತಾ ಅವರಲ್ಲಿದೆ.