ಹೈದರಾಬಾದ್: ಪುಷ್ಪ 2 ರಿಲೀಸ್ ವೇಳೆ ಸಂಧ್ಯಾ ಥಿಯೇಟರ್ ಗೆ ಭೇಟಿ ನೀಡಿದ್ದ ಸಂದರ್ಭ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದ ಮಹಿಳೆ ಕುಟುಂಬಕ್ಕೆ ಅಲ್ಲು ಅರ್ಜುನ್ ಕಡೆಯಿಂದ ಕೊನೆಗೂ ಭಾರೀ ಮೊತ್ತದ ಪರಿಹಾರ ಹಣ ಘೋಷಣೆಯಾಗಿದೆ.
ಅಲ್ಲು ಅರ್ಜುನ್ ಈ ವಿಚಾರವಾಗಿ ಈಗಾಗಲೇ ಸಾಕಷ್ಟು ಸಂಕಷ್ಟ ಎದುರಿಸಿದ್ದಾರೆ. ಸಿಎಂ ರೇವಂತ್ ರೆಡ್ಡಿಯೇ ಅವರ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಎರಡೆರಡು ಕೇಸ್ ದಾಖಲಾಗಿದೆ. ಜೊತೆಗೆ ಅಲ್ಲು ಮನೆಯ ಮೇಲೂ ಕಲ್ಲೆಸೆತವಾಗಿತ್ತು.
ಇಷ್ಟೆಲ್ಲಾ ರದ್ದಾಂತವಾದ ಬಳಿಕ ಇದೀಗ ಅಲ್ಲು ಅರ್ಜುನ್ ವತಿಯಿಂದ ಬರೋಬ್ಬರಿ 2 ಕೋಟಿ ರೂ. ಪರಿಹಾರ ಘೋಷಣೆಯಾಗಿದೆ. ಘಟನೆಯಲ್ಲಿ ಮಹಿಳೆಯ ಪುತ್ರ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಂದು ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಹಾಗೂ ನಿರ್ಮಾಪಕ ದಿಲ್ ರಾಜು ಆಸ್ಪತ್ರೆಗೆ ಭೇಟಿ ನೀಡಿ ಬಾಲಕನ ಆರೋಗ್ಯ ವಿಚಾರಿಸಿದ್ದಾರೆ.
ಬಳಿಕ ಅಲ್ಲು ಅರ್ಜುನ್ ವತಿಯಿಂದ 2 ಕೋಟಿ ರೂ.ಗಳ ಪರಿಹಾರ ಘೋಷಣೆ ಮಾಡಿದ್ದಾರೆ. ಇಂದು ಆಸ್ಪತ್ರೆಗೆ ಭೇಟಿ ನೀಡಿದ ಅಲ್ಲು ಅರವಿಂದ್ ಹಾಗೂ ದಿಲ್ ರಾಜು, ಬಾಲಕನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಜೊತೆಗೂ ಮಾತುಕತೆ ನಡೆಸಿದ್ದಾರೆ. ಇದೀಗ ಆತ ಚೇತರಿಸಿಕೊಳ್ಳುತ್ತಿದ್ದು ಜೀವರಕ್ಷಕದ ಸಹಾಯವಿಲ್ಲದೆ ಉಸಿರಾಡುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ.