ಫ್ಲೋರಿಡಾ: ಸ್ಯಾಂಡಲ್ ವುಡ್ ಸ್ಟಾರ್ ಶಿವರಾಜ್ ಕುಮಾರ್ ಇಂದು ಅಮೆರಿಕಾದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಅವರ ಶಸ್ತ್ರಚಿಕಿತ್ಸೆ ಮತ್ತು ಅನಾರೋಗ್ಯದ ಸಂಪೂರ್ಣ ಮಾಹಿತಿಯನ್ನು ವೈದ್ಯ ಮುರುಗೇಶ್ ನೀಡಿದ್ದಾರೆ.
ಡಾ. ಮುರುಗೇಶ್ ನೇತೃತ್ವದ ವೈದ್ಯರ ತಂಡ ಶಿವಣ್ಣನಿಗೆ ಶಸ್ತ್ರಚಿಕಿತ್ಸೆ ನಡೆಸಿದೆ. ಶಿವಣ್ಣನಿಗೆ ಮೂತ್ರಪಿಂಡದ ಕ್ಯಾನ್ಸರ್ ಆಗಿತ್ತು. ಇದೀಗ ಶಸ್ತ್ರಚಿಕಿತ್ಸೆ ಮೂಲಕ ಕ್ಯಾನ್ಸರ್ ಪೀಡಿತ ಮೂತ್ರಪಿಂಡವನ್ನು ತೆಗೆದು ಹಾಕಲಾಗಿದೆ. ಬದಲಿಯಾಗಿ ಕರುಳನ್ನು ಬಳಸಿ ಕೃತಕ ಮೂತ್ರಪಿಂಡ ಅಳವಡಿಸಲಾಗಿದೆ. ಸದ್ಯಕ್ಕೆ ಅವರ ಆರೋಗ್ಯ ಸ್ಥಿರವಾಗಿದೆ. ಐಸಿಯುವಿನಲ್ಲಿರಿಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಶಿವರಾಜ್ ಕುಮಾರ್ ಸದ್ಯಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ. ಪರಿಣಿತ ವೈದ್ಯರ ತಂಡ ಅವರ ಆರೋಗ್ಯದ ನಿಗಾ ವಹಿಸಿದೆ. ಅವರಿಗೆ ಹಾರೈಸಿದ ಅಭಿಮಾನಿಗಳು, ಮಾಧ್ಯಮಗಳು, ಸಹೋದ್ಯೋಗಿಗಳು, ಶುಭ ಚಿಂತಕರು ಸೇರಿದಂತೆ ಪ್ರತಿಯೊಬ್ಬರಿಗೂ ಧನ್ಯವಾದಗಳು. ಸದ್ಯದಲ್ಲೇ ಮುಂದಿನ ಮಾಹಿತಿ ನೀಡಲಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನು ಪತ್ನಿ ಗೀತಾ ಕೂಡಾ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಭಿಮಾನಿಗಳು ಹೇಗೆ ದೇವರೋ, ವೈದ್ಯರೂ ಹಾಗೆಯೇ ದೇವರ ರೀತಿ ಬಂದಿದ್ದಾರೆ. ಸದ್ಯಕ್ಕೆ ಶಿವರಾಜ್ ಕುಮಾರ್ ಐಸಿಯುವಿನಲ್ಲಿದ್ದಾರೆ. ಸದ್ಯದಲ್ಲಿಯೇ ನಿಮ್ಮ ಬಳಿ ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ.