ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ಶಿವರಾಜ್ ಕುಮಾರ್ ಗೆ ಇಂದು ಅಮೆರಿಕಾದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ.
ಅನಾರೋಗ್ಯದಿಂದ ಬಳಲುತ್ತಿರುವ ಶಿವಣ್ಣ ಮೊನ್ನೆಯಷ್ಟೇ ಪತ್ನಿ ಗೀತಾ ಮತ್ತು ಪುತ್ರಿ ಜೊತೆ ಅಮೆರಿಕಾಗೆ ಪ್ರಯಾಣ ಬೆಳೆಸಿದ್ದರು. ಇದಕ್ಕೆ ಮೊದಲು ತಿರುಪತಿ ತಿಮ್ಮಪ್ಪ, ಕಾವೇರಿ ತಾಯಿಗೆ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದುಕೊಂಡಿದ್ದರು.
ಅಮೆರಿಕಾದ ಪ್ರತಿಷ್ಠಿತ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಶಿವಣ್ಣ ಇಂದು ಸರ್ಜರಿಗೊಳಗಾಗಲಿದ್ದು, ಈ ವೇಳೆ ಅವರ ಜೊತೆಗಿರಲು ಬಾಮೈದ, ಸಚಿವ ಮಧು ಬಂಗಾರಪ್ಪ ಕೂಡಾ ಭಾನುವಾರ ಅಮೆರಿಕಾಗೆ ಪ್ರಯಾಣ ಬೆಳೆಸಿದ್ದಾರೆ.
ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ವೈದ್ಯ ಡಾ. ಮುರುಗೇಶ್ ಎನ್ ಮನೋಹರ್ ನೇತೃತ್ವದಲ್ಲಿ ಶಿವಣ್ಣನಿಗೆ ಸರ್ಜರಿ ಮಾಡಲಿದೆ. ಈ ಶಸ್ತ್ರಚಿಕಿತ್ಸೆ ಬಳಿಕೆ ಶಿವಣ್ಣ ಕೆಲವು ದಿನ ಅಮೆರಿಕಾದಲ್ಲಿಯೇ ಇದ್ದು ವಿಶ್ರಾಂತಿ ಪಡೆಯಲಿದ್ದಾರೆ. ಅದಾದ ಬಳಿಕ ಜನವರಿ ಕೊನೆಯ ವಾರದಲ್ಲಿ ಭಾರತಕ್ಕೆ ಮರಳಲಿದ್ದಾರೆ. ಅಮೆರಿಕಾಗೆ ತೆರಳುವ ಮುನ್ನ ಭಾವುಕರಾಗಿದ್ದ ಶಿವಣ್ಣ ಹುಷಾರಾಗಿ ಬರುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಅವರು ಮೊದಲಿನಂತೆ ಆಗಲಿ ಎನ್ನುವುದು ನಮ್ಮ ನಿಮ್ಮೆಲ್ಲರ ಹಾರೈಕೆ ಕೂಡಾ.