ಹೈದರಾಬಾದ್: ಕನ್ನಡ ಕಿರುತೆರೆ ನಟಿ ಶೋಭಿತಾ ಶಿವಣ್ಣ ಸಾವಿನ ನಿಖರ ಕಾರಣವೇನೆಂದು ಅವರ ಮರಣೋತ್ತರ ಪರೀಕ್ಷಾ ವರದಿ ಖಚಿತಪಡಿಸಿದೆ. ಇದು ಕೊಲೆಯಲ್ಲ ಆತ್ಮಹತ್ಯೆ ಎಂದು ಸ್ಪಷ್ಟವಾಗಿದೆ.
ಬ್ರಹ್ಮಗಂಟು ಧಾರವಾಹಿ ಖ್ಯಾತಿಯ ಶೋಭಿತಾ ಶಿವಣ್ಣ ಮೊನ್ನೆ ತಡರಾತ್ರಿ ತಮ್ಮ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಚೆನ್ನಾಗಿಯೇ ಇದ್ದ ಅವರು ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಳ್ಳುವಂತಹದ್ದು ಏನಾಗಿದೆ ಎಂದು ಎಲ್ಲರೂ ಅಚ್ಚರಿಪಟ್ಟುಕೊಂಡಿದ್ದರು.
ಅಲ್ಲದೆ, ಅವರ ಸಾವಿನಲ್ಲಿ ಯಾರದ್ದಾದರೂ ಕೈವಾಡವಿರಬಹುದೇ ಎಂದು ಶಂಕಿಸಲಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೀಗ ಶೋಭಿತಾ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ದೇಹದ ಮೇಲೆ ಯಾವುದೇ ಗಾಯಗಳಿಲ್ಲ. ಹೀಗಾಗಿ ಇದು ಆತ್ಮಹತ್ಯೆಯೇ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಹಾಗಿದ್ದರೂ ಪೊಲೀಸರು ತನಿಖೆ ನಡೆಸುತ್ತಿದ್ದು, ಸಂಸಾರದಲ್ಲಿ ಏನಾದರೂ ಸಮಸ್ಯೆಯಾಗಿದ್ದಿರಬಹುದೇ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ನೆರೆಹೊರೆಯವರನ್ನೂ ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಇದೀಗ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಲಾಗಿದೆ.