ಫ್ಲೋರಿಡಾ: ಸ್ಯಾಂಡಲ್ ವುಡ್ ಸ್ಟಾರ್ ಶಿವರಾಜ್ ಕುಮಾರ್ ಗೆ ಮೂತ್ರಕೋಶದ ಸರ್ಜರಿ ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನೆರವೇರಿದೆ.
ಪ್ರತಿಷ್ಠಿತ ಮಿಯಾಮಿ ಆಸ್ಪತ್ರೆಯಲ್ಲಿ ಭಾರತೀಯ ಕಾಲಮಾನ ಪ್ರಕಾರ ನಿನ್ನೆ ಸಂಜೆ 6 ಗಂಟೆಗೆ (ಅಮೆರಿಕಾ ಕಾಲಮಾನ ಪ್ರಕಾರ ಬೆಳಿಗ್ಗೆ 8 ಗಂಟೆಗೆ) ಸರ್ಜರಿ ಆರಂಭವಾಗಿದೆ. ಒಟ್ಟು 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆದಿದೆ ಎನ್ನಲಾಗಿದೆ. ಭಾರತೀಯ ಮೂಲದ ಡಾ. ಮುರುಗೇಶ್ ನೇತತ್ವದಲ್ಲಿ ಸರ್ಜರಿ ನಡೆದಿದೆ.
ಶಿವಣ್ಣನಿಗೆ ಶಸ್ತ್ರಚಿಕಿತ್ಸೆ ಹಿನ್ನಲೆಯಲ್ಲಿ ನಿನ್ನೆ ಅವರ ಅಭಿಮಾನಿಗಳು ಪೂಜೆ ನೆರವೇರಿಸುವ ಮೂಲಕ ಆರೋಗ್ಯಕ್ಕಾಗಿ ಪ್ರಾರ್ಥನೆ ನಡೆಸಿದ್ದರು. ಕೊನೆಗೂ ಅಭಿಮಾನಿಗಳ ಪ್ರಾರ್ಥನೆ ಫಲಿಸಿದ್ದು, ಯಶಸ್ವಿಯಾಗಿ ಸರ್ಜರಿ ಪೂರೈಸಲಾಗಿದೆ. ಇನ್ನು ಒಂದು ತಿಂಗಳು ಅವರು ವಿಶ್ರಾಂತಿಯಲ್ಲಿರಲಿದ್ದಾರೆ.
ಕೆಲವು ದಿನಗಳ ಕಾಲ ಅಮೆರಿಕಾದಲ್ಲಿಯೇ ಇದ್ದು ಮುಂದಿನ ಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ. ಜನವರಿ ಕೊನೆಯ ವಾರದಲ್ಲಿ ಭಾರತಕ್ಕೆ ಮರಳುವ ನಿರೀಕ್ಷೆಯಿದೆ. ಶಸ್ತ್ರಚಿಕಿತ್ಸೆ ಸಂದರ್ಭ ಪತ್ನಿ ಗೀತಾ, ಪುತ್ರಿ ನಿವೇದಿತಾ, ಬಾಮೈದ, ಸಚಿವ ಮಧು ಬಂಗಾರಪ್ಪ ಕೂಡಾ ಜೊತೆಯಾಗಿದ್ದರು ಎನ್ನಲಾಗಿದೆ. ಶೀಘ್ರದಲ್ಲೇ ಅವರು ಚೇತರಿಸಿಕೊಳ್ಳುವ ವಿಶ್ವಾಸವಿದೆ.