ಮುಂಬೈ: ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರವು ವಿಶ್ವದಾದ್ಯಂತ ₹1,500 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಇದರಲ್ಲಿ ಬರೋಬ್ಬರಿ ₹ 700 ಕೋಟಿ ಹಿಂದಿ ಅವತರಣಿಕೆಯಿಂದಲೇ ಗಳಿಸಿ ಹೊಸ ದಾಖಲೆ ಬರೆದಿದೆ.
ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಸಿನಿಮಾ ಎಂಬ ಖ್ಯಾತಿಗೆ ಪುಷ್ಪ 2 ಪಾತ್ರವಾಗಿದೆ. ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ ಅಭಿನಯದ ಬಾಹುಬಲಿ 2 ಹಿಂದಿ ಆವೃತ್ತಿಯಲ್ಲಿ ₹500 ಕೋಟಿ ಗಳಿಸಿತ್ತು. ಆಗ ಆ ಹಂತ ತಲುಪಿದ ಮೊದಲ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಚಿತ್ರಗಳ ವ್ಯವಹಾರ ವಿಶ್ಲೇಷಕ ತರಣ್ ಆದರ್ಶ್ ಪ್ರಕಾರ, ಅಲ್ಲು ಅರ್ಜುನ್ ಅಭಿನಯದ ಹಿಂದಿ ಡಬ್ಬಿಂಗ್ ಆವೃತ್ತಿಯ ಚಿತ್ರವು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ₹700 ಕೋಟಿ ಗಳಿಸಿದ ಮೊದಲ ಹಿಂದಿ ಚಲನಚಿತ್ರವಾಗಿದೆ. ಹೀಗಾಗಿ, ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ₹700 ಕೋಟಿ ಕ್ಲಬ್‌ನ ಹೊಸ ಮೈಲುಗಲ್ಲನ್ನು ಸ್ಥಾಪಿಸಿದೆ.
ಈ ತಿಂಗಳಲ್ಲಿ ತೆರೆಕಂಡ ತೆಲುಗಿನ ಪುಷ್ಪ 2 ಡಬ್ಬಿಂಗ್ ಆವೃತ್ತಿಯು 19 ದಿನಗಳಲ್ಲಿ ₹700 ಕೋಟಿಯ ಕ್ಲಬ್ ತೆರೆದಿದೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆ ಇರುವುದರಿಂದ ಪುಷ್ಪ 2 ದಾಖಲೆಯ ಓಟವನ್ನು ಮುಂದುವರಿಸಲಿದೆ ಎಂದು ತರಣ್ ಆದರ್ಶ್ ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಅಮರ್ ಕೌಶಿಕ್ ಅವರ ಮತ್ತೊಂದು ಹಾರರ್ ಕಾಮಿಡಿ ಚಿತ್ರ ಸ್ತ್ರೀ 2 ಹಿಂದಿ ಅವತರಣಿಕೆ ₹600 ಕೋಟಿ ಗಳಿಸಿತ್ತು. ₹600 ಕೋಟಿ ಕ್ಲಬ್ ಸೇರಿದ ಮೊದಲ ಸಿನಿಮಾ ಎಂಬ ದಾಖಲೆಯನ್ನು ಈ ಚಿತ್ರ ಬರೆದಿತ್ತು. ಆ ದಾಖಲೆಯನ್ನೂ ಪುಷ್ಪ 2 ಮುರಿದಿದೆ.