ಹೈದರಾಬಾದ್: ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2 ಚಿತ್ರ ಬಿಡುಗಡೆಗೊಂಡ 15 ದಿನಗಳಲ್ಲಿ ₹1,508 ಕೋಟಿ ಗಳಿಕೆ ಕಂಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ನಟ ಅಲ್ಲು ಅರ್ಜುನ್ ಪೋಸ್ಟ್ ಹಂಚಿಕೊಂಡು ಮಾಹಿತಿ ನೀಡಿದ್ದಾರೆ. ಪುಷ್ಪ 2 ಚಿತ್ರದ ಮೇಲೆ ನೀವು (ಅಭಿಮಾನಿಗಳು) ತೋರಿದ ಪ್ರೀತಿ ಮತ್ತು ಅಭಿಮಾನಕ್ಕೆ ಧನ್ಯವಾದಗಳು ಎಂದು ಅಲ್ಲು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ
ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ ಸುಕುಮಾರ್ ನಿರ್ದೇಶನದ ತೆಲುಗು ಸಿನಿಮಾ ಪುಷ್ಪ 2 ದಿ ರೂಲ್ ಚಿತ್ರ ಬಿಡುಗಡೆಯಾಗಿ ₹1,508 ಕೋಟಿ ಗಳಿಸಿದೆ. ಪುಷ್ಪ 2 ಅತ್ಯುತ್ತಮ ಪ್ರದರ್ಶನ ಕಾಣುತ್ತಿದ್ದು, ಬುಕ್‌ಮೈಶೋನಲ್ಲಿಯೂ ಅತ್ಯಧಿಕ ಟಿಕೆಟ್ ಬುಕಿಂಗ್ ಆಗಿದೆ. ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು ಎಂದು ಚಿತ್ರತಂಡ ತಿಳಿಸಿದೆ.
ಈ ಮೂಲಕ ಭಾರತದಲ್ಲಿ 2024ರಲ್ಲಿ ತೆರೆಗೆ ಬಂದ ಚಿತ್ರಗಳಲ್ಲಿ ಗರಿಷ್ಠ ಗಳಿಕೆಯ ದಾಖಲೆ ಬರೆದಿದೆ. ಮಾತ್ರವಲ್ಲ, ಟಾಲಿವುಡ್‌ನಲ್ಲಿ ಬಾಹುಬಲಿ ಬಳಿಕ ಗರಿಷ್ಠ ಹಣ ಮಾಡಿದ ಚಿತ್ರವೂ ಇದಾಗಿದೆ.
ಪುಷ್ಪ-2 ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಜಗಪತಿ ಬಾಬು ಸೇರಿದಂತೆ ಅನೇಕ ಖ್ಯಾತನಾಮರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಡಿ.4ರಂದು ವಿಶ್ವದಾದ್ಯಂತ ಸಿನಿಮಾ ತೆರೆಕಂಡು ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ತೆಲುಗು, ತಮಿಳು, ಕನ್ನಡ, ಹಿಂದಿ, ಬೆಂಗಾಳಿ, ಮಲಯಾಳ ಭಾಷೆಗಳಲ್ಲಿ ಚಿತ್ರವು ತೆರೆಗೆ ಬಂದಿದೆ.