ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಶುದ್ಧ ಸಸ್ಯಾಹಾರಿಯಾಗಿರುವ ಧನರಾಜ್ ಆಚಾರ್ ಗೆ ಚಿಕನ್ ತಿನಿಸಿ ಮನೆಯವರು ತಮಾಷೆ ಮಾಡಿದ್ದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಹಲ್ ಚಲ್ ಸೃಷ್ಟಿಸಿದೆ.
ಟಾಸ್ಕ್ ನಡುವೆ ಸಹ ಸ್ಪರ್ಧಿಗಳು ನೀಡಿದ ಆಹಾರವನ್ನು ಧನರಾಜ್ ಸೇವಿಸುತ್ತಾರೆ. ಆಗ ಭವ್ಯಾ ಅದು ಚಿಕನ್ ಎಂದು ನಗುತ್ತಾ ಹೇಳುತ್ತಾರೆ. ಶಾಕ್ ಆದ ಧನರಾಜ್ ಸಹ ಸ್ಪರ್ಧಿ ರಜತ್ ಗೆ ಕೇಳುತ್ತಾರೆ. ಹೌದು ಎಂದು ರಜತ್ ಹೇಳಿದಾಗ ಸೀದಾ ಕಿಚನ್ ಸಿಂಕ್ ಬಳಿ ಓಡುವ ಧನರಾಜ್ ಬಾಯಿ ತೊಳೆದುಕೊಳ್ಳುತ್ತಾರೆ.
ಆಗ ಉಳಿದ ಸ್ಪರ್ಧಿಗಳು ಜೋರಾಗಿ ನಗುತ್ತಾರೆ. ರಜತ್ ಹೋಗಿ ಗಂಜಲ ಹಾಕಿಕೊಂಡು ಬಾಯಿ ತೊಳ್ಕೋ ಎಂದು ಅಪಹಾಸ್ಯ ಮಾಡುತ್ತಾರೆ. ಇದರ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಆಹಾರ ಎನ್ನುವುದು ಅವರವರ ಆಯ್ಕೆ. ಈ ವಿಚಾರದಲ್ಲಿ ಯಾಕೆ ಅವರನ್ನು ಉಳಿದ ಸ್ಪರ್ಧಿಗಳು ಅಪಹಾಸ್ಯ ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಮತ್ತೆ ಕೆಲವರು ಬಿಗ್ ಬಾಸ್ ಗೆ ಬಂದ ಮೇಲೆ ಎಲ್ಲವನ್ನೂ ಬಿಡಬೇಕು, ಮಡಿವಂತಿಕೆ ಇದ್ದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಏನೇ ಆದರೂ ಚಿಕನ್ ತಿಂದ ಮೇಲೆ ಅಪರಾಧಿ ಪ್ರಜ್ಞೆಯಿಂದ ಧನರಾಜ್ ದೇವರಿಗೆ ಅಡ್ಡಬಿದ್ದು ಕ್ಷಮೆ ಯಾಚಿಸಿದ್ದಾರೆ.