ಬೆಂಗಳೂರು: ಸಾಹಸಸಿಂಹ ಡಾ ವಿಷ್ಣುವರ್ಧನ್ ಸೀನಿಯರ್ ನಟ. ಅವರಿಗೆ ಅಪ್ಪುಗಿಂತ ಮೊದಲೇ ಕರ್ನಾಟಕ ಪ್ರಶಸ್ತಿ ಕೊಡಬೇಕಿತ್ತು ಎಂದು ನಟ ರವಿಚೇತನ್ ಈಗ ವಿವಾದ ಮೈಮೇಲೆಳೆದುಕೊಂಡಿದ್ದಾರೆ.
ಸಾಹಸಸಿಂಹ ಡಾ ವಿಷ್ಣುವರ್ಧನ್ ಗೆ ಇತ್ತೀಚೆಗಷ್ಟೇ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಲಾಗಿದೆ. ಇದರ ಬಗ್ಗೆ ಸಂದರ್ಶನವೊಂದರಲ್ಲಿ ನಟ ರವಿಚೇತನ್ ಬೇಸರ ಹೊರಹಾಕಿದ್ದಾರೆ. ಅವರು ಹಿರಿಯ ನಟ. ಅವರು ಸಾವನ್ನಪ್ಪಿದ 16-17 ವರ್ಷಗಳ ನಂತರ ಪ್ರಶಸ್ತಿ ಕೊಡಬೇಕಿತ್ತಾ?
ಹಾಗೆ ನೋಡಿದರೆ ವಿಷ್ಣು ಸರ್ ಸೀನಿಯರ್ ನಟ. ಅಪ್ಪುಗಿಂತ ಮೊದಲೇ ಅವರಿಗೆ ಕೊಡಬೇಕಿತ್ತು ಎಂದಿದ್ದಾರೆ. ಅವರು ಇದ್ದಾಗ ಜನ ಹೇಗಿದ್ದರು, ಅವರು ಹೋದ ಮೇಲೆ ಹೇಗೆ ಬಣ್ಣ ಬದಲಾಯಿಸಿದರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ರವಿಚೇತನ್ ಹೇಳಿಕೆ ನೀಡಿದ್ದರು.
ವಿಷ್ಣು ಸರ್ ಗೆ ನಿಧಾನವಾಗಿ ನೀಡಲಾಯಿತು ಎಂದಿದ್ದಕ್ಕೆ ಅಭಿಮಾನಿಗಳ ತಕರಾರು ಇಲ್ಲ. ಆದರೆ ಮಾತಿನ ಭರದಲ್ಲಿ ಪುನೀತ್ ರಾಜ್ ಕುಮಾರ್ ಅವರ ಹೆಸರು ಎಳೆದು ತಂದಿದ್ದಕ್ಕೆ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷ್ಣು ಸರ್ ಗೆ ಕೊಡಲಿ ಅದಕ್ಕೆ ನಮ್ಮ ಆಕ್ಷೇಪ ಇಲ್ಲ, ಆದರೆ ಇಲ್ಲಿ ವಿನಾಕಾರಣ ಪುನೀತ್ ರಾಜ್ ಕುಮಾರ್ ಹೆಸರು ಯಾಕೆ ಎಳೆದು ತರುತ್ತೀರಿ? ಪ್ರಶಸ್ತಿ ಕೊಡಿ ಎಂದು ಅಣ್ಣಾವ್ರ ಕುಟುಂಬದವರು ಯಾವತ್ತೂ ಬೇಡಿಕೊಂಡಿರಲಿಲ್ಲ.ಹಾಗಿರುವಾಗ ಪುನೀತ್ ಗೆ ಮೊದಲೇ ಸಿಕ್ಕಿತ್ತು ಎಂದು ಹೇಳುವ ಅವಶ್ಯಕತೆ ಏನಿತ್ತು ಎಂದು ರವಿ ಚೇತನ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.