ಬೆಂಗಳೂರು: ಶಿವರಾಜ್ ಕುಮಾರ್, ದರ್ಶನ್ ಸೇರಿದಂತೆ ಕನ್ನಡ ಚಿತ್ರರಂಗದ ಮೇರು ನಟರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂಬ ಅಡಿಯೋ ವೈರಲ್ ಆದ ಬೆನ್ನಲ್ಲೇ ರೇಪ್ ಆರೋಪಿ, ನಟ ಮಡೆನೂರು ಮನುವಿಗೆ ಫಿಲಂ ಚೇಂಬರ್ ನಿಷೇಧ ಹೇರಿದೆ. ಇದಕ್ಕೀಗ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದರ್ಶನ್ ಗೆ ಯಾಕೆ ಬ್ಯಾನ್ ಮಾಡಿಲ್ಲ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧಿತರಾದಾಗ ಅವರ ಮೇಲೆ ಬಂದಂತಹ ಆರೋಪಗಳು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ರೇಣುಕಾಸ್ವಾಮಿಯನ್ನು ಅಷ್ಟು ಅಮಾನುನಷವಾಗಿ ಕೊಲೆ ಮಾಡಲಾಗಿತ್ತು. ಇದರಲ್ಲಿ ದರ್ಶನ್ ಪ್ರಮುಖ ಆರೋಪಿಯಾಗಿ ಅರೆಸ್ಟ್ ಆಗಿದ್ದರು.
ಆಗಲೂ ದರ್ಶನ್ ರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲಾಗುತ್ತದೆಯೇ ಎಂಬ ಪ್ರಶ್ನೆ ಎದ್ದಿತ್ತು. ಆದರೆ ಆಗ ಸಭೆ ನಡೆಸಿದ್ದ ಫಿಲಂ ಚೇಂಬರ್ ದರ್ಶನ್ ಮೇಲೆ ಆರೋಪ ಸಾಬೀತಾದರೆ ಖಂಡಿತಾ ಬ್ಯಾನ್ ಮಾಡುತ್ತೇವೆ. ಈಗ ಅವರು ಆರೋಪಿ ಅಷ್ಟೇ. ಅವರನ್ನು ನಂಬಿಕೊಂಡು ಸಾಕಷ್ಟು ನಿರ್ಮಾಪಕರಿದ್ದಾರೆ ಎಂದೆಲ್ಲಾ ಕಾರಣ ನೀಡಿತ್ತು.
ಆದರೆ ಈಗ ಮಡೆನೂರು ಮನು ಬಗ್ಗೆ ದೂರು ದಾಖಲಾದ ಬೆನ್ನಲ್ಲೇ ನಿಷೇಧ ಶಿಕ್ಷೆ ವಿಧಿಸಲಾಗಿದೆ. ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಪ್ರಶ್ನೆ ಮಾಡಿದ್ದಾರೆ. ಶಿವಣ್ಣನಂತಹ ನಟನ ಬಗ್ಗೆ ಮಾತನಾಡಿದ್ದಕ್ಕೆ ಮಡೆನೂರು ಮನುವಿಗೆ ತಕ್ಕ ಶಿಕ್ಷೆಯೇ ಆಗಿದೆ. ಆದರೆ ದರ್ಶನ್ ವಿಚಾರದಲ್ಲಿ ಯಾಕೆ ಫಿಲಂ ಚೇಂಬರ್ ಈ ಕ್ರಮ ಕೈಗೊಳ್ಳಲಿಲ್ಲ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಬಡಪಾಯಿ ನಟನ ಮೇಲೆ ನಿಷೇಧದ ಬ್ರಹ್ಮಾಸ್ತ್ರ, ಆದರೆ ಸ್ಟಾರ್ ನಟರ ಮೇಲೆ ಈ ಕ್ರಮ ಕೈಗೊಳ್ಳುವ ಧಮ್ ನಿಮಗಿಲ್ಲ ಎಂದು ಕಿಡಿ ಕಾರಿದ್ದಾರೆ.