ಬೆಂಗಳೂರು: ಶಿವಣ್ಣ, ದರ್ಶನ್, ಧ್ರುವ ಸರ್ಜಾ ಬಗ್ಗೆ ಕೆಟ್ಟದಾಗಿ ಮಾತನಾಡಿದ ಅಡಿಯೋ ವೈರಲ್ ಆದ ಬೆನ್ನಲ್ಲೇ ರೇಪ್ ಆರೋಪಕ್ಕೊಳಗಾಗಿ ಬಂಧನದಲ್ಲಿರುವ ನಟ ಮಡೆನೂರು ಮನುವನ್ನು ಸಿನಿಮಾ ಮತ್ತು ಕಿರುತೆರೆಯಿಂದ ಬ್ಯಾನ್ ಮಾಡಲಾಗಿದೆ.
ಸಹನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಡೆನೂರು ಮನು ಈಗ ಬಂಧನದಲ್ಲಿದ್ದಾರೆ. ಮೊನ್ನೆಯಷ್ಟೇ ಅವರ ಮೊದಲ ಸಿನಿಮಾ ಕುಲದಲ್ಲಿ ಕೀಳ್ಯಾವುದೋ ಬಿಡುಗಡೆಯಾಗಿತ್ತು. ಇದರ ಬೆನ್ನಲ್ಲೇ ಅವರಿಗೆ ನಿಷೇಧದ ಶಿಕ್ಷೆ ಸಿಕ್ಕಿದೆ.
ರೇಪ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೇ ಮಡೆನೂರು ಮನು ಅಡಿಯೋ ಒಂದು ವೈರಲ್ ಆಗಿತ್ತು. ಇದರಲ್ಲಿ ಮನು ದರ್ಶನ್ ಸತ್ತೋದ, ಶಿವಣ್ಣ ಇನ್ನೊಂದು ಆರು ವರ್ಷ ಆದ ಮೇಲೆ ಸಾಯ್ತಾರೆ ಎಂದೆಲ್ಲಾ ಮನಬಂದಂತೆ ಮಾತನಾಡಿದ್ದರು.
ಇದರ ಬೆನ್ನಲ್ಲೇ ಇಂದು ಮಾಧ್ಯಮಗೋಷ್ಠಿ ನಡೆಸಿದ ಫಿಲಂ ಚೇಂಬರ್ ಮಡೆನೂರು ಮನುವನ್ನು ಸಿನಿಮಾದಿಂದ ಬ್ಯಾನ್ ಮಾಡಿರುವುದಾಗಿ ಘೋಷಣೆ ಮಾಡಿದೆ. ಅಲ್ಲದೆ, ಶಿವಣ್ಣ ವಿರುದ್ಧ ಅವಹೇಳನಕಾರೀ ಹೇಳಿಕೆ ನೀಡಿರುವುದರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತಿರುವುದಾಗಿ ಫಿಲಂ ಚೇಂಬರ್ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ಯುವ ನಟನ ನಟನೆಯ ಕನಸು ಭಗ್ನಗೊಂಡಿದೆ.