ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಗೆ ಆಪರೇಷನ್ ಮಾಡಿಸಬೇಕು, ಜಾಮೀನು ಕೊಡಿ ಎಂದು ಅವರ ಪರ ವಕೀಲರು ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ. ಇದಕ್ಕೆ ನ್ಯಾಯಾಧೀಶರ ಪ್ರತಿಕ್ರಿಯೆ ಏನಿತ್ತು ಇಲ್ಲಿದೆ ವಿವರ.
ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಈಗ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರಿಗೆ ಬೆನ್ನು ನೋವು ತೀವ್ರವಾಗಿದ್ದು ದೈನಂದಿನ ಕೆಲಸ ಮಾಡಲೂ ಸಮಸ್ಯೆಯಾಗುತ್ತಿದೆ. ಈ ನಡುವೆ ಅವರಿಗೆ ಜೈಲಿನಲ್ಲೇ ವೈದ್ಯರ ಸಲಹೆ ಮೇರೆಗೆ ಫಿಸಿಯೋಥೆರಪಿ ಮಾಡಲಾಗುತ್ತಿದೆ.
ಇಂದು ಹೈಕೋರ್ಟ್ ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆಗೆ ಬಂದಿದ್ದು, ಅವರ ಆರೋಗ್ಯ ಸ್ಥಿತಿ ಬಗ್ಗೆ ಅವರ ಪರ ವಕೀಲರು ಕೋರ್ಟ್ ಗೆ ವಿವರಣೆ ನೀಡಿದ್ದಾರೆ. ದರ್ಶನ್ ಗೆ ತೀವ್ರವಾಗಿ ಬೆನ್ನು ನೋವು ಕಾಡುತ್ತಿದೆ. ಅವರಿಗೆ ನಿನ್ನೆ ವಿಮ್ಸ್ ನಲ್ಲಿ ಎಂಆರ್ ಐ ಸ್ಕ್ಯಾನಿಂಗ್ ಮಾಡಿಸಲಾಗಿದೆ. ವೈದ್ಯರು ಆಪರೇಷನ್ ಮಾಡಿಸಿಕೊಳ್ಳಲು ಸೂಚನೆ ನೀಡಿದ್ದಾರೆ. ಹೀಗಾಗಿ ಜಾಮೀನು ನೀಡಿ ಎಂದು ವಕೀಲರು ಕೋರ್ಟ್ ಗೆ ಹೇಳಿದ್ದಾರೆ.
ಇದಕ್ಕೆ ನ್ಯಾಯಾಧೀಶರು ಅವರ ವೈದ್ಯಕೀಯ ವರದಿ ನೀಡುವಂತೆ ಸೂಚಿಸಿದೆ. ದರ್ಶನ್ ಪರ ವಕೀಲ ಸಿವಿ ನಾಗೇಶ್ ಮನವಿ ಮಾಡಿದರು. ದರ್ಶನ್ ಬೆನ್ನು ಹುರಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಆಪರೇಷನ್ ಮಾಡಬೇಕಿದೆ ಎಂದಿದ್ದಾರೆ. ಆದರೆ ವೈದ್ಯಕೀಯ ವರದಿ ಮತ್ತು ಎಸ್ ಪಿಪಿ ಪ್ರಸನ್ನಕುಮಾರ್ ಆಕ್ಷೇಪಣೆಗೆ ಕೋರ್ಟ್ ಅವಕಾಶ ನೀಡಿದ್ದು, ಅಕ್ಟೋಬರ್ 28 ಕ್ಕೆ ಮುಂದಿನ ವಿಚಾರಣೆ ನಡೆಸುವುದಾಗಿ ಹೇಳಿದೆ.