Publish Date: Wed, 22 Jun 2022 (16:25 IST)
Updated Date: Wed, 22 Jun 2022 (16:26 IST)
ಬೆಂಗಳೂರು: ಗೋವಾದಲ್ಲಿ ಪೆಟ್ಟು ಮಾಡಿಕೊಂಡಿದ್ದ ನಟ ದಿಗಂತ್ ಸದ್ಯದ ಆರೋಗ್ಯ ಸ್ಥಿತಿ ಗತಿ ಬಗ್ಗೆ ಇಂದು ಪತ್ನಿ, ನಟಿ ಐಂದ್ರಿತಾ ರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ದಿಗಂತ್ ಚೇತರಿಸಿಕೊಳ್ಳುತ್ತಿದ್ದಾರೆ. ಗೋವಾದಿಂದ ಮೂರು ಕಿ.ಮೀ.ದೂರದಲ್ಲಿರುವ ರೆಸಾರ್ಟ್ ಗೆ ಹೋಗಿದ್ದೆವು. ನಿಮಗೆಲ್ಲಾ ಗೊತ್ತಿರುವ ಹಾಗೆ ದಿಗಂತ್ ಗೆ ಸಾಹಸ ಕ್ರೀಡೆಗಳೆಂದರೆ ಇಷ್ಟ. ಹಾಗೇ ಸಮ್ಮಸ್ ಶಾಟ್ ಹೊಡೆಯುವಾಗ ಸ್ವಲ್ಪ ಆಯತಪ್ಪಿ ಕುತ್ತಿಗೆಗೆ ಪೆಟ್ಟಾಗಿದೆ. ಬೆನ್ನುಲುಬಿಗೆ ಯಾವುದೇ ತೊಂದರೆಯಾಗಿಲ್ಲ. ತಕ್ಷಣವೇ ಅವರನ್ನು ಗೋವಾ ಸರ್ಕಾರದ ಸಹಾಯದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಿದೆವು. ಇದಕ್ಕೆ ನಾನು ಅವರಿಗೆ ಧನ್ಯವಾದ ಸಲ್ಲಿಸಲು ಬಯಸುತ್ತೇನೆ.
ಕೆಲವೇ ಗಂಟೆಗಳಲ್ಲಿ ಆಪರೇಷನ್ ಮಾಡಬೇಕಿತ್ತು. ಹೀಗಾಗಿ ಏರ್ ಲಿಫ್ಟ್ ಮಾಡಿದೆವು. ಈಗ ಆಪರೇಷನ್ ಆಗಿದ್ದು, ದಿಗಂತ್ ಆರೋಗ್ಯವಾಗಿದ್ದಾರೆ. ಇವತ್ತು ಅಥವಾ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಈಗಾಗಲೇ ವೈದ್ಯರ ಬಳಿ ಇನ್ನೊಮ್ಮೆ ಸಮ್ಮಸ್ ಶಾಟ್ ಮಾಡಲು ರೆಡಿ ಎಂದಿದ್ದಾರಂತೆ. ನಿಮ್ಮೆಲ್ಲರ ಹಾರೈಕೆಯಿಂದ ಅವರು ಚೇತರಿಸಿಕೊಂಡಿದ್ದಾರೆ ಎಂದು ಐಂದ್ರಿತಾ ಮಾಹಿತಿ ನೀಡಿದ್ದಾರೆ.