ಬೆಂಗಳೂರು: ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೇ ಉಳಿದ ಆಟಗಾರರ ಪ್ರಮುಖ ಆಟಗಾರರ ಪೈಕಿ ಸುರೇಶ್ ರೈನಾ ಕೂಡಾ ಒಬ್ಬರು.
ಇದುವರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದ ರೈನಾರನ್ನು ಈ ವರ್ಷ ಸಿಎಸ್ ಕೆ ಹರಾಜಿಗೆ ಬಿಟ್ಟುಕೊಟ್ಟಿತ್ತು. ಮೊದಲ ದಿನ ಯಾವುದೇ ತಂಡ ರೈನಾರನ್ನು ಕೊಳ್ಳಲಿಲ್ಲ. ಎರಡನೇ ದಿನವೂ ರೈನಾ ಮಾರಾಟವಾಗದೇ ಉಳಿದರು.
ಸಿಎಸ್ ಕೆ ಬಳಿ ಆಟಗಾರರನ್ನು ಖರೀದಿ ಮಾಡಿದ 2 ಕೋಟಿ ಗೂ ಹೆಚ್ಚು ಹಣ ಮಿಕ್ಕಿದ್ದರೂ ರೈನಾರನ್ನು ಕನಿಷ್ಠ ಬೆಲೆಗೂ ಕೊಳ್ಳಲಿಲ್ಲ. ಈ ಹಿಂದೆ ಯುಎಇನಲ್ಲಿ ಧೋನಿ ಜೊತೆ ಮನಸ್ತಾಪವಾಗಿ ರೈನಾ ಕೂಟವನ್ನು ಅರ್ಧಕ್ಕೇ ಬಿಟ್ಟು ಬಂದಿದ್ದರು. ಹಾಗಿದ್ದರೂ ಕಳೆದ ಆವೃತ್ತಿಯಲ್ಲಿ ಚೆನ್ನೈ ತಂಡದ ಭಾಗವಾಗಿದ್ದರು. ಆದರೆ ಈಗ ಹರಾಜಿನಲ್ಲಿ ರೈನಾರನ್ನು ಮತ್ತೆ ಕೊಳ್ಳಲು ಚೆನ್ನೈ ಆಸಕ್ತಿ ತೋರಲಿಲ್ಲ.ಹೀಗಾಗಿ ಅವರ ಐಪಿಎಲ್ ವೃತ್ತಿ ಜೀವನ ಮುಕ್ತಾಯವಾದಂತೇ ಲೆಕ್ಕ ಎನ್ನಬಹುದು.