ಇಂದು ದೀಪಿಕಾ ಪಡುಕೋಣೆ ಜನ್ಮದಿನ: ನೀವೂ ಹಾರೈಸಿ

ನಾಗಶ್ರೀ ಭಟ್

ಶುಕ್ರವಾರ, 5 ಜನವರಿ 2018 (15:36 IST)
ಮುಂಬೈ: ಬಾಲಿವುಡ್ ಮತ್ತು ಹಾಲಿವುಡ್ ತಾರೆಯಾಗಿ ಮಿನುಗುತ್ತಿರುವ ದೀಪಿಕಾ ಪಡುಕೋಣೆಗೆ ಇಂದು 32ನೇ ಜನ್ಮದಿನ. 

ಜನವರಿ 5, 1986 ರಂದು ಭಾರತದ ಪ್ರಭಾವಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಮತ್ತು ಉಜ್ಜಲಾ ಅವರ ಮುದ್ದಿನ ಮಗಳಾಗಿ ಜನ್ಮಿಸಿರುವ ಇವರಿಗೆ ಅನಿಶಾ ಎನ್ನುವ ತಂಗಿಯೊಬ್ಬಳಿದ್ದು ಅವರು ಗಾಲ್ಫ್ ಆಟಗಾರ್ತಿ. ದೀಪಿಕಾ ಚಿಕ್ಕವಳಿರುವಾಗ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದು ನಂತರ ಮಾಡಲಿಂಗ್ ಕ್ಷೇತ್ರಕ್ಕೆ ಬಂದು ಈಗ ಬಾಲಿವುಡ್ ತಾರೆಯಾಗಿ ಮಿಂಚುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.
 
ಕನ್ನಡದ 'ಐಶ್ವರ್ಯ' ಚಿತ್ರದಲ್ಲಿ ಮೊದಲು ಬಣ್ಣ ಹಚ್ಚಿದ ಇವರು ಬಾಲಿವುಡ್‌ನ ಮೊದಲ ಸಿನೆಮಾ 'ಓಂ ಶಾಂತಿ ಓಂ' ನಲ್ಲಿ ಬಾಲಿವುಡ್‌ನ ಸ್ಟಾರ್ ನಟ ಶಾರುಕ್ ಖಾನ್ ಅವರ ಜೊತೆಗೆ ಅತ್ಯುತ್ತಮವಾಗಿ ಅಭಿನಯಿಸಿ ಹಿಟ್ ಚಿತ್ರವನ್ನು ನೀಡಿ ಕೆಲವೇ ದಿನಗಳಲ್ಲಿ ಸ್ಟಾರ್ ನಟಿಯ ಪಟ್ಟವನ್ನು ಅಲಂಕರಿಸಿದರು. ಇದರ ನಂತರ ತಮ್ಮ ವೃತ್ತಿ ಜೀವನದಲ್ಲಿ ಹಿಂತಿರುಗಿ ನೋಡದೇ ಬಚನಾ ಏ ಹಸೀನೋ, ಕಾಕ್ಟೈಲ್, ಯೇ ಜವಾನಿ ಹೇ ದಿವಾನಿ, ಚೆನ್ನೈ ಎಕ್ಸ್‌ಪ್ರೆಸ್, ಕೊಚಡಿಯನ್, ರಾಮ್ ಲೀಲಾ, ಬಾಜಿರಾವ್ ಮಸ್ತಾನಿ, ಪೀಕು ಹೀಗೆ ಹಲವಾರು ಹಿಟ್ ಚಿತ್ರಗಳನ್ನು ನೀಡಿ ಅಧಿಕ ಸಂಭಾವನೆಯನ್ನು ಪಡೆಯುವ ಬಾಲಿವುಡ್ ತಾರೆಯರಲ್ಲಿ ಒಬ್ಬರಾಗಿದ್ದಾರೆ. ದೀಪಿಕಾ ಈವರೆಗೆ ಅನೇಕ ಅತ್ಯುತ್ತಮ ನಾಯಕಿ ಕ್ಷೇತ್ರಕ್ಕೆ ನೀಡುವ ಅವಾರ್ಡ್‌ಗಳನ್ನು ಪಡೆದು ಕೊಂಡಿದ್ದಾರೆ. 2017 ರಲ್ಲಿ ರಿಟರ್ನ್ ಆಫ್ ಎಕ್ಸೆಂಡರ್ ಕೇಜ್ ಮೂಲಕ ಹಾಲಿವುಡ್‌ಗೂ ಪ್ರವೇಶಿಸಿದ್ದಾರೆ. 2018 ರಲ್ಲಿ ದೀಪಿಕಾ ಅಭಿನಯದ ಬಹುನಿರೀಕ್ಷಿತ ಚಿತ್ರ ಪದ್ಮಾವತಿ ಬಿಡುಗಡೆಯಾಗಲಿದೆ.
 
ಕೆಲವು ಮೂಲಗಳ ಪ್ರಕಾರ ದೀಪಿಕಾ ಇಂದು ಶ್ರೀಲಂಕಾದಲ್ಲಿ ಜನ್ಮದಿನದಂದು ತಮ್ಮ ಪ್ರೇಮಿ ರಣವೀರ್ ಸಿಂಗ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಅದೇನೇ ಆಗಿದ್ದರೂ ದೀಪಿಕಾ ಅವರ ಈ ಜನ್ಮದಿನ ಅವರಿಗೆ ವರ್ಷಪೂರ್ತಿ ಸಂತೋಶವನ್ನು ತರಲಿ, ಅವರು ಇನ್ನೂ ಹೆಚ್ಚು ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುವಂತಾಗಲಿ ಎಂದು ಹಾರೈಸೋಣ. ಹುಟ್ಟು ಹಬ್ಬದ ಶುಭಾಶಯಗಳು ದೀಪಿಕಾ...!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರವಿಚಂದ್ರನ ಪುತ್ರನ ಸಿನೆಮಾ 'ಬೃಹಸ್ಪತಿ' ಇಂದು ತೆರೆಯಮೇಲೆ...!!