ಸಾಮಾನ್ಯವಾಗಿ ಗರ್ಭಿಣಿಯರು ನಾರ್ಮಲ್ ಹೆರಿಗೆಯಾದರೂ ಹೆಚ್ಚು ನೋವಿಲ್ಲದೇ ಸುಸ್ರೂತ್ರವಾಗಿ ಹೆರಿಗೆಯಾಗಲಿ ಎಂದು ಪ್ರಾರ್ಥಿಸುತ್ತಾರೆ. ಹಾಗಿದ್ದರೆ ನಾರ್ಮಲ್ ಡೆಲಿವರಿ ಸುಲಭವಾಗಿ ಆಗಬೇಕಾದರೆ ಏನು ಮಾಡಬೇಕು? ಇಲ್ಲಿದೆ ಕೆಲವು ಟೆಕ್ನಿಕ್.
ಆಕ್ಟಿವ್ ಆಗಿರಿ
ಕೆಲವರು ಗರ್ಭಿಣಿ ಎಂದು ಗೊತ್ತಾದ ತಕ್ಷಣ ಕಾಲು ನೆಲದ ಮೇಲೇ ಇಡಲ್ಲ. ಅಷ್ಟು ಬೆಡ್ ಗೆ ಅಂಟಿಕೊಂಡು ಬಿಡುತ್ತಾರೆ. ಅದನ್ನು ಬಿಟ್ಟು ಗುಡಿಸುವುದು, ಒರೆಸುವುದು ಇಂತಹ ಹೊಟ್ಟೆಗೆ ಸಣ್ಣದಾಗಿ ವ್ಯಾಯಾಮ ಸಿಗುವ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿರಬೇಕು. ಅಂದರೆ ಹೆರಿಗೆಯೂ ಸುಸ್ರೂತ್ರವಾಗಿರುತ್ತದೆ.
ಈ ರೀತಿಯ ವ್ಯಾಯಾಮ ಮಾಡಬೇಕು: ಆದಷ್ಟು ನಿಮ್ಮ ಕೆಳಹೊಟ್ಟೆಗೆ, ತೊಡೆ ಭಾಗಕ್ಕೆ ವ್ಯಾಯಾಮ ಸಿಗುವಂತೆ ನೋಡಿಕೊಳ್ಳಬೇಕು. ಮಾಂಸಖಂಡಗಳು ಬಲಯುತವಾಗಬೇಕು. ಗೋವಿನ ಭಂಗಿಯ ಸರಳ ಯೋಗಗಳನ್ನು ಮಾಡುತ್ತಿರಬೇಕು. ಪ್ರತಿನಿತ್ಯ ತಪ್ಪದೇ ವಾಕಿಂಗ್ ಮಾಡಬೇಕು. ಹಾಗೂ ಉಸಿರಾಟದ ವ್ಯಾಯಾಮ ಅಂದರೆ ಪ್ರಾಣಾಯಾಮದಂತಹ ವ್ಯಾಯಾಮಗಳನ್ನು ಮಾಡುತ್ತಿರಬೇಕು. ಇದರಿಂದ ನೋವು ತಡೆಯುವ ಶಕ್ತಿ ನಿಮಗೆ ಬರುತ್ತದೆ.
ಕುಳಿತುಕೊಳ್ಳುವ ಭಂಗಿ ಹೀಗಿರಲಿ
ಇಳಿ ಬೀಳುವ ಭಂಗಿಯಲ್ಲಿ ಕುಳಿತುಕೊಳ್ಳುವುದು, ಏಳುವುದು ಮಾಡಬೇಡಿ. ಕುಳಿತುಕೊಳ್ಳುವಾಗ ನಿಮ್ಮ ಮೊಣಕಾಲುಗಳು ಯಾವತ್ತೂ ಸೊಂಟದ ಮಟ್ಟಕ್ಕಿಂತ ಕೆಳಗೇ ಇರಲಿ. ಅಂದರೆ ಕಾಲು ಮೇಲೆತ್ತಿ ಕೂರುವುದು, ಜೋತು ಬಿದ್ದಂತೆ ಕೂರುವುದು ಮಾಡಬೇಡಿ. ಸಮತಟ್ಟಾದ ಕುರ್ಚಿಯಲ್ಲಿ ನೇರವಾಗಿ ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ದಿನಕ್ಕೆ 10 ರಿಂದ 15 ನಿಮಿಷ ಸರಳ ವ್ಯಾಯಾಮ ಮಾಡಿ. ಆದಷ್ಟು ಒಂದೇ ಕಡೆ ಸುದೀರ್ಘ ಅವಧಿವರೆಗೆ ಕೂರುವುದು ಅಥವಾ ಮಲಗಿಕೊಂಡಿರಬೇಡಿ. ದೇಹವನ್ನು ಸಡಿಲಗೊಳಿಸಿ, ಅತ್ತಿತ್ತ ಓಡಾಡುತ್ತಿರಿ.
ಇದರ ಜೊತೆಗೆ ಸಮತೋಲಿತ ಆಹಾರ, ಸಾಕಷ್ಟು ಪ್ರಮಾಣದಲ್ಲಿ ನೀರು ಅಥವಾ ನೀರಿನಂಶ ಸೇವನೆ ಮಾಡುವುದು, ಕಬ್ಬಿಣದಂಶ ಹೇರಳವಾಗಿರುವ ಆಹಾರ ಸೇವನೆ ಮಾಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಗರ್ಭಿಣಿಯಾಗಿದ್ದೀರೆಂದು ಬೇಕಾಬಿಟ್ಟಿ ತಿಂದು ದೇಹ ತೂಕ ಅತಿಯಾಗಿ ಹೆಚ್ಚಿಸಿಕೊಳ್ಳದಂತೆ ಎಚ್ಚರವಹಿಸಿ.