ದೀಪಾವಳಿ ಹಬ್ಬ ಮುಗಿದೇ ಹೋಯ್ತು. ಆದರೆ ಹಬ್ಬದ ಸಂದರ್ಭದಲ್ಲಿ ಪಟಾಕಿಯಿಂದಾಗಿ ವಾಯು ಮಾಲಿನ್ಯವಾಗಿ ಆರೋಗ್ಯದ ಮೇಲೆ ಪರಿಣಾಮವಾಗಿದ್ದರೆ ಏನು ಮಾಡಬೇಕು ನೋಡಿ.
ದೀಪಾವಳಿ ಸಂದರ್ಭದಲ್ಲಿ ಎಲ್ಲರಿಗೂ ಪಟಾಕಿ ಹೊಡೆಯುವ ಸಂಭ್ರಮ. ಆದರೆ ಇದರಿಂದಾಗಿ ವಾತಾವರಣದಲ್ಲಿ ಹೊಗೆ ತುಂಬಿಕೊಂಡು ಅನೇಕ ಆರೋಗ್ಯ ಸಮಸ್ಯೆಯಾಗುತ್ತದೆ. ಹೀಗಿದ್ದಾಗ ಅದನ್ನು ತಕ್ಷಣವೇ ಪರಿಹರಿಸಿಕೊಳ್ಳಬೇಕು.
ಯಾವೆಲ್ಲಾ ಆರೋಗ್ಯ ಸಮಸ್ಯೆಯಾಗುತ್ತದೆ
ಈಗಾಗಲೇ ಉಸಿರಾಟ, ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆ ಅನುಭವಿಸುತ್ತಿರುವವರಿಗೆ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಅಸ್ತಮಾ, ಬ್ರಾಂಕೈಟಿಸ್ ಸೇರಿದಂತೆ ಉಸಿರಾಟದ ಸಮಸ್ಯೆ ಉಲ್ಬಣವಾಗಬಹುದು. ಇಂತಹವರು ಆದಷ್ಟು ಮನೆಯಿಂದ ಹೊರಗೆ ಬಾರದೇ ಇರುವುದೇ ಉತ್ತಮ. ಅನಿವಾರ್ಯವಾದರೆ ಮಾಸ್ಕ್ ಹಾಕಿಕೊಂಡೇ ಓಡಾಡಿ.
ತಲೆನೋವು, ಗಂಟಲು ಕಿರಿ ಕಿರಿ, ಎದೆ ಉರಿ, ಕಫ, ಕೆಮ್ಮಿನ ಸಮಸ್ಯೆ ಕಂಡುಬರಬಹುದು. ಇದಕ್ಕಾಗಿ ಆದಷ್ಟು ನೀರು ಅಥವಾ ನೀರಿನಂಶ ಸೇವನೆ ಮಾಡುತ್ತಾ ದೇಹ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಿ.
ಕಣ್ಣು: ವಿಶೇಷವಾಗಿ ಪಟಾಕಿಯಿಂದ ಕಣ್ಣಿಗೆ ಹಾನಿಯಾಗುವ ಸಂಭವ ಹೆಚ್ಚು. ಕಣ್ಣಿಗೆ ಗಾಯವಾಗುವುದು ಒಂದು ಕಡೆಯಾದರೆ ಹೊಗೆಯಿಂದಾಗಿ ಕಣ್ಣು ಉರಿ, ಅಲರ್ಜಿ, ಕೆಂಪಗಾಗುವುದು ಇತ್ಯಾದಿ ಸಮಸ್ಯೆ ಕಂಡುಬರಬಹುದು. ಹೀಗಿದ್ದಾಗ ಆಗಾಗ ಕಣ್ಣುಗಳನ್ನು ಶುದ್ಧ ನೀರಿನಿಂದ ತೊಳೆಯುತ್ತಿರಿ.
ನೆನಪಿರಲಿ, ಯಾವುದೇ ಸಮಸ್ಯೆಗಳು ನಿಮ್ಮ ಮಿತಿ ಮೀರಿದೆ ಎನಿಸಿದರೆ ತಕ್ಷಣವೇ ತಜ್ಞ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ. ತಡ ಮಾಡಿದಷ್ಟೂ ಸಮಸ್ಯೆ ಗಂಭೀರವಾಗಬಹುದು.