ಮಂಗಳೂರು: ಒಂದೆಡೆ ರಾಜ್ಯದಲ್ಲಿ ಆರ್ ಎಸ್ಎಸ್ ಮತ್ತು ರಾಜ್ಯ ಸರ್ಕಾರದ ನಡುವಿನ ಜಟಾಪಟಿ ತಾರಕಕ್ಕೇರಿದೆ. ಈ ನಡುವೆ ಆರ್ ಎಸ್ಎಸ್ ಹಿನ್ನಲೆಯಿಂದ ಬಂದ ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ ಸಂಘದ ಬಗ್ಗೆ ಹೇಳುವುದೇನು ಗೊತ್ತಾ?
ಅಶೋಕ್ ರೈ ಮೊದಲು ಬಿಜೆಪಿಯಲ್ಲಿದ್ದವರು. ಆದರೆ ಅಲ್ಲಿ ತಮಗೆ ಸೂಕ್ತ ಸ್ಥಾನ ಮಾನ ಸಿಗಲಿಲ್ಲವೆಂದು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ವಿಧಾನಸಭೆ ಚುನಾವಣೆಗೆ ನಿಂತು ಗೆಲುವು ಸಾಧಿಸಿದ್ದರು. ಆದರೆ ಅವರ ಮೂಲ ಆರ್ ಎಸ್ಎಸ್.
ಇದೀಗ ಕಹಳೆ ನ್ಯೂಸ್ ಸಂದರ್ಶನದಲ್ಲಿ ಅಶೋಕ್ ರೈ ಅವರಿಗೆ ಆರ್ ಎಸ್ಎಸ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಲಾಗಿತ್ತು. ಇದಕ್ಕೆ ಉತ್ತರಿಸಿರುವ ಅವರು ಆರ್ ಎಸ್ಎಸ್ ಸಂಸ್ಥೆ ಕೆಟ್ಟದ್ದು ಎಂದು ನಾನು ಹೇಳಲ್ಲ. ಅದು ಮಾಡುವ ಕೆಲವು ಕೆಲಸಗಳು ಕೆಲವರಿಗೆ ಇಷ್ಟವಾಗದೇ ಇರಬಹುದು. ಆದರೆ ಸಂಸ್ಥೆಯನ್ನು ಕೆಟ್ಟದ್ದು ಎಂದು ನಾನು ಹೇಳುವುದಿಲ್ಲ. ರಾಜಕೀಯವಾಗಿ ಕೆಲವರು ವಿರೋಧಿಸಬಹುದು. ಆದರೆ ಈ ಸಂಸ್ಥೆ ತನ್ನದೇ ಕೆಲವು ಕಾರ್ಯಕ್ರಮಗಳನ್ನು ರೂಪಿಸಕೊಂಡು ಅದಕ್ಕೆ ತಕ್ಕಂತೆ ಹೋಗ್ತಿದೆ. ಅದು ಕೆಲವರಿಗೆ ಇಷ್ಟವಾಗದೇ ಇರಬಹುದು ಎಂದು ಅಶೋಕ್ ರೈ ಹೇಳಿದ್ದಾರೆ.
ವಿಶೇಷವೆಂದರೆ ಅವರು ಎಲ್ಲೂ ಆರ್ ಎಸ್ಎಸ್ ಸಂಸ್ಥೆಯ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿಲ್ಲ. ಇದೀಗ ಆರ್ ಎಸ್ಎಸ್ ವರ್ಸಸ್ ಸರ್ಕಾರದ ನಡುವಿನ ಜಟಾಪಟಿ ನಡುವೆ ಅಶೋಕ್ ರೈ ಗಣ ವೇಷದಲ್ಲಿರುವ ಫೋಟೋ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.