ಬೆಂಗಳೂರು: ಆರ್ ಎಸ್ಎಸ್ ವಿರುದ್ಧ ದಿಡೀರ್ ಕೆಂಡ ಕಾರುತ್ತಿರುವ ಪ್ರಿಯಾಂಕ್ ಖರ್ಗೆ ಬಗ್ಗೆ ಈಗ ಪಕ್ಷದೊಳಗೇ ಅಪರಸ್ವರ ಶುರುವಾಗಿದೆ.
ಆರ್ ಎಸ್ಎಸ್ ಚಟುವಟಿಕೆಗಳಿಗೆ ನಿಯಂತ್ರಣ ಹೇರಲು ಮುಖ್ಯಮಂತ್ರಿಗೆ ಪತ್ರ ಬರೆದಿದ್ದ ಪ್ರಿಯಾಂಕ್ ಖರ್ಗೆ ಅದರಲ್ಲೀಗ ಯಶಸ್ವಿಯೂ ಆಗಿದ್ದಾರೆ. ರಾಜ್ಯ ಸರ್ಕಾರ ಹೊಸದೊಂದು ನಿಯಮ ಜಾರಿಗೆ ತಂದಿದ್ದು ಇನ್ನೀಗ ಆರ್ ಎಸ್ಎಸ್ ಸೇರಿದಂತೆ ಖಾಸಗಿ ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಮಾಡಬೇಕಾದರೆ ಸರ್ಕಾರದ ಒಪ್ಪಿಗೆ ಪಡೆಯಬೇಕು.
ಆದರೆ ಇದರಿಂದಾಗಿ ಈಗ ರಾಜ್ಯದಲ್ಲಿ ಆರ್ ಎಸ್ಎಸ್ ವರ್ಸಸ್ ಪ್ರಿಯಾಂಕ್ ಖರ್ಗೆ ಜಟಾಪಟಿ ತಾರಕಕ್ಕೇರಿದೆ. ಕೆಲವು ಜಿಲ್ಲೆಗಳಲ್ಲಿ ನಾವು ಪಥಸಂಚಲನ ಮಾಡಿಯೇ ತೀರುತ್ತೇವೆ ಎಂದು ಆರ್ ಎಸ್ಎಸ್ ರಂಗಕ್ಕೆ ಧುಮುಕಿದರೆ ಇತ್ತ ಸ್ಥಳೀಯಾಡಳಿತ ಅದಕ್ಕೆ ಒಪ್ಪಿಗೆ ನೀಡದೇ ಸತಾಯಿಸುತ್ತಿದೆ.
ಈ ವಿದ್ಯಮಾನದ ನಡುವೆ ಪ್ರಿಯಾಂಕ್ ಖರ್ಗೆ ಮೇಲೆ ಪಕ್ಷದೊಳಗೇ ಕೆಲವು ಹಿರಿಯ ನಾಯಕರು ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ. ಒಂದೆಡೆ ರಾಜ್ಯದಲ್ಲಿ ರಸ್ತೆ ಗುಂಡಿ, ಉದ್ಯಮಿಗಳು ಅಸಮಾಧಾನದಿಂದ ಸರ್ಕಾರದ ಮೇಲೆ ಜನರ ಅಸಮಾಧಾನ ಇರುವಾಗ ಇತ್ತ ವಿನಾಕಾರಣ ಆರ್ ಎಸ್ಎಸ್ ಗೂಡಿಗೆ ಕೈ ಹಾಕಿ ಇಲ್ಲದ ವಿವಾದ ಮೈಮೇಲೆಳೆದುಕೊಂಡಂತಾಗಿದೆ ಎಂದು ಕೆಲವು ನಾಯಕರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಆರ್ ಎಸ್ಎಸ್ ಕಾರ್ಯಕ್ರಮಗಳನ್ನು ನಿಯಂತ್ರಿಸುವ ಕಸರತ್ತು ಈ ಸಂದರ್ಭದಲ್ಲಿ ಬೇಡವಾಗಿತ್ತು ಎಂದು ಕೆಲವರ ಅಭಿಪ್ರಾಯವಾಗಿದೆ.