Select Your Language

Notifications

webdunia
webdunia
webdunia
webdunia

ಮುಖ್ಯಮಂತ್ರಿಗಳೇ ನಿಮ್ಮ ಪಕ್ಷದ ಪ್ರಚಾರದ ಗೀಳಿಗೆ ಇನ್ನೆಷ್ಟು ದುರ್ಘಟನೆ ಬೇಕು

Putturu Janamana Event

Sampriya

ಪುತ್ತೂರು , ಸೋಮವಾರ, 20 ಅಕ್ಟೋಬರ್ 2025 (22:13 IST)
Photo Credit X
ಪುತ್ತೂರು: ನಗರದಲ್ಲಿ ಸೋಮವಾರ ನಡೆದ ಅಶೋಕ ಜನಮನ ಕಾರ್ಯಕ್ರಮದಲ್ಲಿ ಉಡುಗೊರೆ ಪಡೆಯುವ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲಿನಿಂದಾಗಿ ಉಸಿರು ಕಟ್ಟಿ ಪ್ರಜ್ಞೆ ಕಳೆದುಕೊಂಡ 13 ಮಂದಿಯನ್ನು ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಶಾಲವಾದ ಕೊಂಬೆಟ್ಟು ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.‌ ಮುಖ್ಯಮಂತ್ರಿ ಪಾಲ್ಗೊಂಡ ಕಾರ್ಯಕ್ರಮ ಆಗಿರುವುದರಿಂದ ನೀರಿನ ಬಾಟಲಿ ತೆಗೆದುಕೊಂಡು ಹೋಗಲು ಪೊಲೀಸರು ಅನುವು ಮಾಡಲಿಲ್ಲ.

ಈ ಘಟನೆ ಸಂಬಂಧ ಬಿಜೆಪಿ, ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದೆ. 

ಬಿಜೆಪಿ ಪೋಸ್ಟ್‌ನಲ್ಲಿ ಹೀಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ, ಕಾಂಗ್ರೆಸ್ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿ ಹಲವರು ಗಾಯಗೊಂಡಿರುವ ಘಟನೆ ವಿಷಾದನೀಯ.

ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಪ್ರಕರಣ ನಡೆದ ಬಳಿಕವೂ ಸರ್ಕಾರ ಎಚ್ಚೆತ್ತುಕೊಳ್ಳದ ಪರಿಣಾಮ ಈ ದುರಂತ ನಡೆದಿದೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ದೀಪಾವಳಿ ಸಂಭ್ರಮಮಾಚರಣೆ ನಡೆಸಬೇಕಾಗಿದ್ದ ಮನೆಗಳಲ್ಲಿ ದುಃಖ ಆವರಿಸಿದೆ. ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲೆಂದು ಆಶಿಸುತ್ತೇವೆ. 

ಮುಖ್ಯಮಂತ್ರಿಗಳೇ ನಿಮ್ಮ ಪಕ್ಷದ ಪ್ರಚಾರದ ಗೀಳಿಗೆ ಇನ್ನೆಷ್ಟು ದುರ್ಘಟನೆಗಳು ನಡೆಯಬೇಕು?

12 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಂದಾಗ 1 ಗಂಟೆ ಆಗಿತ್ತು. ಜನರು ಬೆಳಿಗ್ಗೆಯಿಂದಲೇ ಬಂದು ಕಾಯುತ್ತಿದ್ದರು. ಒಂದು ಲಕ್ಷ ಜನರಿಗೆ ಉಡುಗೊರೆ ಹಂಚಲಾಗುವುದು ಎಂದು ಸಂಘಟಕರು ಘೋಷಿಸಿದ್ದರು. ಕಾರ್ಯಕ್ರಮ ಮುಕ್ತಾಯಗೊಂಡಾಗ 3 ಗಂಟೆಯಾಗಿತ್ತು. ನೀರು ಆಹಾರವಿಲ್ಲದೆ ಸುಸ್ತಾಗಿದ್ದ ಜನರು ಉಡುಗೊರೆಗಾಗಿ ಹೋದಾಗ ನೂಕುನುಗ್ಗಲು ಉಂಟಾಯಿತು.‌ ತಲೆ ಸುತ್ತು ಬಂದು ಬಿದ್ದವರನ್ನು ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಲಾಯಿತು.

ಅನೇಕ ಮಕ್ಕಳು ದಾರಿಯಲ್ಲೂ ಪ್ರಜ್ಞೆ ತಪ್ಪಿ ಬಿದ್ದರು. ಅವರಿಗೆ ಅಂಗಡಿಯಿಂದ ನೀರಿನ ಬಾಟಲಿ ಖರೀದಿಸಿ ಕುಡಿಯಲು ಕೊಟ್ಟು ಮತ್ತು ಮುಖಕ್ಕೆ ಚಿಮುಕಿಸಿ ಪೋಷಕರು ಸಂತೈಸಿದರು.

ಆಹಾರ ಮತ್ತು ಗಿಫ್ಟ್ ವಿಳಂಬವಾಗಿ ನೀಡಿದ ಕಾರಣ ಹೈಪೊಗ್ಲೇಸಮೀಯ ಅಥವಾ ಡಿಹೈಡ್ರೇಷನ್ ಉಂಟಾಗಿದೆ, 3 ಮಹಿಳೆಯರಿಗೆ ಐ.ವಿ. ಫ್ಲೂಯಿಡ್ಸ್ ನೀಡಲಾಗಿದ್ದು 7 ಮಹಿಳೆಯರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸ್ವೀಟ್ ಖರೀದಿಸಿದ ರಾಹುಲ್ ಗಾಂಧಿಗೆ ಶಾಕಿಂಗ್ ಬೇಡಿಕೆಯಿಟ್ಟ ಅಂಗಡಿ ಮಾಲೀಕ