ಬೆಂಗಳೂರು: ದಲಿತ ಸಂಘಟನೆಗಳಿಗೆ ನಂದೇ ಪ್ರಾಯೋಜಕತ್ವ ಎಂದುಕೊಳ್ಳಿ. ಏನಿವಾಗ? ಎಂದು ಪ್ರಶ್ನೆ ಮಾಡಿದ ಪ್ರಿಯಾಂಕ್ ಖರ್ಗೆಯನ್ನು ನೆಟ್ಟಿಗರು ಟ್ರೋಲ್ ಮಾಡಿದ್ದು ಈ ಸಂಘಟನೆಯಲ್ಲಿದ್ದವರನ್ನೂ ಸಸ್ಪೆಂಡ್ ಮಾಡಲ್ವಾ ಎಂದು ಕಾಲೆಳೆದಿದ್ದಾರೆ.
ದಲಿತ ಸಂಘಟನೆಗಳಿಗೆ ಪ್ರಿಯಾಂಕ್ ಖರ್ಗೆಯವರೇ ಪ್ರಾಯೋಜಕತ್ವ ವಹಿಸುತ್ತಿದ್ದಾರೆ. ಅವರ ಮೂಲಕ ಆರ್ ಎಸ್ಎಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಆರೋಪಗಳಿಗೆ ಸಚಿವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ನಂದೇ ಪ್ರಾಯೋಜಕತ್ವ ಎಂದುಕೊಳ್ಳಿ ತಪ್ಪೇನಿದೆ? ಆದರೆ ಆರ್ ಎಸ್ಎಸ್ ಒಂದು ನೋಂದಣಿಯಾಗದ ಸಂಸ್ಥೆ. ಇದಕ್ಕೆ ಎಲ್ಲಿಂದ ಬರುತ್ತೆ ದುಡ್ಡು? ಯಾರು ಪ್ರಾಯೋಜಕರು? ಬಟ್ಟೆ ಹೊಲಿಸಕ್ಕೆ, ಡ್ರಮ್ ಖರೀದಿಸಕ್ಕೆ, ಪಥಸಂಚಲನ ಆಯೋಜಿಸಕ್ಕೆ ಮತ್ತು ಕಟ್ಟಡಗಳನ್ನು ನಿರ್ಮಾಣ ಮಾಡಲು ಎಲ್ಲಿಂದ ಬರುತ್ತೆ ದುಡ್ಡು ಎಂದು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಹಾಗಿದ್ದರೆ ದಲಿತ ಸಂಘಟನೆಯಲ್ಲಿ ಗುರುತಿಸಿಕೊಂಡವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಸರ್ಕಾರೀ ನೌಕರರು ದಲಿತ ಸಂಘಟನೆಯಲ್ಲಿ ಗುರುತಿಸಿಕೊಳ್ಳಬಾರದು ಎಂದು ನಿಯಮ ಮಾಡಬಹುದಲ್ವೇ ಎಂದು ಕೇಳಿದ್ದಾರೆ. ಇನ್ನು ಕೆಲವರು ಪ್ರಿಯಾಂಕ್ ಖರ್ಗೆ ಪ್ರಶ್ನೆ ಸರಿಯಾಗಿಯೇ ಇದೆ ಎಂದವರೂ ಇದ್ದಾರೆ.