ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಈಗ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಬಳಿಕ ಈಗ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಹವಾ ಎನ್ನಬಹುದು.
ನಮ್ಮಪ್ಪ ಸಿದ್ದರಾಮಯ್ಯ ನಂತರ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ನಾಯಕತ್ವ ವಹಿಸಲು ಸೂಕ್ತ ಎಂದಿದ್ದ ಯತೀಂದ್ರ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದಾರೆ. ಈ ಮೂಲಕ ರಾಜ್ಯ ಕಾಂಗ್ರೆಸ್ ನಲ್ಲಿ ಮತ್ತೆ ನಾಯಕತ್ವದ ಚರ್ಚೆ ಹುಟ್ಟು ಹಾಕಿದ್ದಾರೆ.
ಇದಕ್ಕೆ ಮೊದಲು ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಆರ್ ಎಸ್ಎಸ್ ವಿರುದ್ಧ ನಿಷೇಧಾಸ್ತ್ರ ಪ್ರಯೋಗಿಸಿದ್ದಲ್ಲದೆ, ಬಿಜೆಪಿ ನಾಯಕರು ಹೈಕಮಾಂಡ್ ಗೆ ಈ ಹಿಂದೆ ಕಪ್ಪ ನೀಡಿದ್ದರು ಎಂದು ವಿಡಿಯೋಗಳನ್ನು ಹರಿಯಬಿಟ್ಟು ದೊಡ್ಡ ಸಂಚಲನ ಸೃಷ್ಟಿಸಿದ್ದರು.
ಪ್ರಿಯಾಂಕ್ ಖರ್ಗೆ ಆರ್ ಎಸ್ಎಸ್ ಹುತ್ತಕ್ಕೆ ಕೈ ಹಾಕಿದ್ದಕ್ಕೆ ಕಾಂಗ್ರೆಸ್ ನೊಳಗೇ ಕೆಲವು ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಮಲ್ಲಿಕಾರ್ಜುನ ಖರ್ಗೆ ಪುತ್ರ ಎನ್ನುವ ಕಾರಣಕ್ಕೆ ಅವರು ಏನೇ ಹೇಳಿದರೂ ನಡೆಯುತ್ತದೆ ಎನ್ನುವ ಅಸಮಾಧಾನವೂ ಪಕ್ಷದೊಳಗೆ ಇದೆ ಎಂಬ ಗುಸು ಗುಸು ಕೇಳಿಬಂದಿತ್ತು. ಇದೀಗ ಯತೀಂದ್ರ ಸಿದ್ದರಾಮಯ್ಯ ತಣ್ಣಗಾಗಿದ್ದ ನಾಯಕತ್ವ ವಿಚಾರವನ್ನು ಮತ್ತೆ ಕೆದಕಿದ್ದಾರೆ. ಅವರ ಒಂದು ಹೇಳಿಕೆ ರಾಜ್ಯ ಕಾಂಗ್ರೆಸ್ ನಲ್ಲಿ ಮತ್ತೆ ಅಸಮಾಧಾನದ ಹೊಗೆ ಏಳುವಂತೆ ಮಾಡಿದೆ.