ಬೆಂಗಳೂರು: ನಮ್ಮಪ್ಪನ ನಂತರ ಕಾಂಗ್ರೆಸ್ ಗೆ ಸತೀಶ್ ಜಾರಕಿಹೊಳಿ ನಾಯಕತ್ವ ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಸಿಎಂ ಆಗುವ ಕನಸು ಹೊತ್ತಿರುವ ಡಿಕೆ ಶಿವಕುಮಾರ್ ಗೆ ಚೆಕ್ ಮೇಟ್ ಕೊಟ್ಟಿದ್ದಾರೆ.
ರಾಯಭಾಗ ತಾಲೂಕಿನ ಶ್ರೀ ಸಂತ ಕನಕದಾಸರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮತ್ತೆ ಕಾಂಗ್ರೆಸ್ ನಲ್ಲಿ ನಾಯಕತ್ವದ ವಿಚಾರವಾಗಿ ಚರ್ಚೆಯಾಗುವಂತಹ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಗೆ ಪ್ರಗತಿಪರ ಸಿದ್ಧಾಂತ ಹೊಂದಿರುವ ನಾಯಕ ಬೇಕು. ಇದಕ್ಕೆ ಸತೀಶ್ ಜಾರಕಿಹೊಳಿಯವರೇ ಸೂಕ್ತ. ನಮ್ಮ ತಂದೆ ಈವತ್ತು ರಾಜಕೀಯದ ಕೊನೆಗಾಲದಲ್ಲಿದ್ದಾರೆ. ಅವರ ನಂತರ ಪಕ್ಷ ಮುನ್ನಡೆಸಲು ಸತೀಶ್ ಜಾರಕಿಹೊಳಿಯವರೇ ಸೂಕ್ತ ಎಂದಿದ್ದಾರೆ.
ಆದರೆ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಡಿಕೆ ಶಿವಕುಮಾರ್ ಬೆಂಬಲಿಗರನ್ನು ಕೆರಳಿಸುವುದು ಪಕ್ಕಾ. ಈಗಾಗಲೇ ತಾಳ್ಮೆಯಿಂದ ಸಿಎಂ ಕುರ್ಚಿಗಾಗಿ ಕಾದಿರುವ ಡಿಕೆಶಿಗೆ ಕೌಂಟರ್ ಕೊಡುವಂತಿದೆ ಯತೀಂದ್ರ ಹೇಳಿಕೆ. ಇದಕ್ಕೆ ಡಿಕೆಶಿ ಬೆಂಬಲಿಗರು ಯಾವ ರೀತಿ ಉತ್ತರ ಕೊಡುತ್ತಾರೆ ಕಾದು ನೋಡಬೇಕಿದೆ.