ಅಹಮ್ಮದಾಬಾದ್: ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿದರೂ ಟೀಂ ಇಂಡಿಯಾಗೆ ಬಹುಮಾನ ರೂಪದಲ್ಲಿ ಭಾರೀ ಮೊತ್ತದ ಹಣ ಸಂದಾಯವಾಗಿದೆ.
ಆಸ್ಟ್ರೇಲಿಯಾ ಆರನೇ ಬಾರಿಗೆ ವಿಶ್ವಕಪ್ ಟ್ರೋಫಿ ಗೆದ್ದು ಮೆರೆದಿದೆ. ಭಾರತ ಇದು ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸಿದ್ದು ಎರಡನೇ ಬಾರಿಗೆ ರನ್ನರ್ ಅಪ್ ಆಗಿ ತೃಪ್ತಿಪಟ್ಟುಕೊಂಡಿದೆ.
ರನ್ನರ್ ಅಪ್ ಆಗಿದ್ದರೂ ಬಹುಮಾನ ಮೊತ್ತ ರೂಪದಲ್ಲಿ ಐಸಿಸಿ ಭಾರತಕ್ಕೆ ಸರಿಸುಮಾರು 16.20 ಕೋಟಿ ರೂ. ಪಾವತಿಸಲಿದೆ. ಇದಲ್ಲದೆ ಐಸಿಸಿ ಈ ಕೂಟದಲ್ಲಿ ಇದೇ ಮೊದಲ ಬಾರಿಗೆ ಲೀಗ್ ಹಂತದಲ್ಲೂ ಪ್ರತೀ ಪಂದ್ಯ ಗೆದ್ದ ಬಳಿಕ ಆಯಾ ತಂಡಕ್ಕೆ ಬಹುಮಾನ ಮೊತ್ತ ಘೋಷಿಸಿತ್ತು. ಅದರಂತೆ ಭಾರತ ಎಲ್ಲಾ 10 ಪಂದ್ಯಗಳನ್ನು ಗೆದ್ದಿದ್ದರಿಂದ ಹೆಚ್ಚುವರಿಯಾಗಿ 3 ಕೋಟಿ ರೂ.ಗೂ ಅಧಿಕ ಮೊತ್ತ ಸಂದಾಯವಾಗಲಿದೆ.
ಇನ್ನು ಪ್ರಶಸ್ತಿ ವಿಜೇತ ಆಸ್ಟ್ರೇಲಿಯಾ ತಂಡಕ್ಕೆ 32 ಕೋಟಿ ರೂ. ಬಹುಮಾನ ಮೊತ್ತ ಸಿಗಲಿದೆ. ಅಲ್ಲದೆ ಗ್ರೂಪ್ ಹಂತದಲ್ಲಿ ಪಂದ್ಯಗಳ ಗೆಲುವಿಗಾಗಿ ಹೆಚ್ಚುವರಿ 2.33 ಕೋಟಿ ರೂ. ಗಳಿಸಲಿದೆ.