ಅಹಮ್ಮದಾಬಾದ್: 2003 ರಲ್ಲಿ ಸೌರವ್ ಗಂಗೂಲಿ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತರೂ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಅವಾರ್ಡ್ ಪಡೆದಿದ್ದರು.
ಆ ಟೂರ್ನಿಯುದ್ದಕ್ಕೂ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದ ಸಚಿನ್ ದಾಖಲೆಯ 620 ರನ್ ಗಳಿಸಿ ಚಿನ್ನದ ಬ್ಯಾಟ್ ನ್ನು ಉಡುಗೊರೆಯಾಗಿ ಪಡೆದಿದ್ದರು. ಆದರೆ ಭಾರತ ಫೈನಲ್ ಸೋತಿದ್ದರಿಂದ ಸಚಿನ್ ಮುಖದಲ್ಲಿ ಅವಾರ್ಡ್ ಪಡೆಯುವಾಗ ಆ ನಗುವೇ ಇರಲಿಲ್ಲ.
ಇಂದು ವಿರಾಟ್ ಕೂಡಾ ಅದೇ ಸ್ಥಿತಿಯಲ್ಲಿದ್ದರು. ಈ ವಿಶ್ವಕಪ್ ಟೂರ್ನಿಯಲ್ಲಿ ಅಂದಿನ ಸಚಿನ್ ರನ್ ದಾಖಲೆಯನ್ನು ಮುರಿದ ಕೊಹ್ಲಿ ಒಟ್ಟು 765 ರನ್ ಕಲೆ ಹಾಕಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಅವಾರ್ಡ್ ಪಡೆದಿದ್ದಾರೆ. ಆದರೆ ಪ್ರಶಸ್ತಿಗೆ ತಮ್ಮ ಹೆಸರು ಕೂಗುತ್ತಿದ್ದಂತೇ ಮತ್ತು ಪ್ರಶಸ್ತಿ ಪಡೆದ ಮೇಲೆ ಪೋಸ್ ಕೊಡುವಾಗಲೂ ಕೊಹ್ಲಿ ಮುಖದಲ್ಲಿ ನಗುವೇ ಇರಲಿಲ್ಲ. ತೀರಾ ದುಃಖದಲ್ಲೇ ಪ್ರಶಸ್ತಿ ಪಡೆದರು.
ಸಚಿನ್ ಮತ್ತು ಕೊಹ್ಲಿಯನ್ನು ಬ್ಯಾಟಿಂಗ್ ದಾಖಲೆಗಳ ವಿಚಾರಕ್ಕೆ ಹೋಲಿಕೆ ಮಾಡಲಾಗುತ್ತದೆ. ವಿಪರ್ಯಾಸವೆಂದರೆ ಈ ವಿಚಾರದಲ್ಲೂ ಇಬ್ಬರ ಪರಿಸ್ಥಿತಿಯೂ ಒಂದೇ ಆಗಿತ್ತು!