ಮುಂಬೈ: ಮೊಹಮ್ಮದ್ ಶಮಿಯನ್ನು ಫಿಟ್ ಇದ್ದರೂ ತಂಡಕ್ಕೆ ಆಯ್ಕೆ ಮಾಡದಿರುವ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ವಿರುದ್ಧ ಮಾಜಿ ಕ್ರಿಕೆಟಿಗರು ಮುಗಿಬಿದ್ದಿದ್ದಾರೆ.
ಟೀಂ ಇಂಡಿಯಾದಲ್ಲಿ ಈಗ ಡೆತ್ ಓವರ್ ಗಳಲ್ಲಿ ಬೌಲಿಂಗ್ ಮಾಡುವ ವೇಗಿಗಳ ಕೊರತೆ ಎದ್ದು ಕಾಣುತ್ತಿದೆ. ಜಸ್ಪ್ರೀತ್ ಬುಮ್ರಾ ಇಲ್ಲದೇ ಹೋದರೆ ತಂಡದ ಬೌಲಿಂಗ್ ಪೇಲವವಾಗುತ್ತಿದೆ. ಕಳೆದ ಪಂದ್ಯದಲ್ಲಿ ಸೋತ ಬಳಿಕವಂತೂ ಮೊಹಮ್ಮದ್ ಶಮಿ ವಾಪಸಾತಿಗೆ ಒತ್ತಡ ಹೆಚ್ಚಾಗಿದೆ.
ಫಿಟ್ ಇದ್ದು ದೇಶೀಯ ಕ್ರಿಕೆಟ್ ನಲ್ಲಿ ಮಿಂಚುತ್ತಿದ್ದರೂ 2023 ರ ವಿಶ್ವಕಪ್ ಹೀರೋ ಮೊಹಮ್ಮದ್ ಶಮಿಯನ್ನ ಫಿಟ್ ಇಲ್ಲ ಎಂದು ನೆಪ ಹೇಳಿ ಆಯ್ಕೆ ಮಾಡದ ಅಜಿತ್ ಅಗರ್ಕರ್ ವಿರುದ್ಧ ಮಾಜಿ ಕ್ರಿಕೆಟಿಗರು ಕಿಡಿ ಕಾರಿದ್ದಾರೆ. ಶಮಿಯನ್ನು ಯಾಕೆ ಆಯ್ಕೆ ಮಾಡುತ್ತಿಲ್ಲ. ಪ್ರಸಿದ್ಧ ಕೃಷ್ಣ ಉತ್ತಮ ಬೌಲರ್ ಇರಬಹುದು. ಆದರೆ ಅವರು ಕಲಿಯಬೆಕಾಗಿರುವುದು ಇನ್ನೂ ಸಾಕಷ್ಟಿದೆ. ಬುಮ್ರಾ ಇರುವಾಗ ತಂಡದ ಬೌಲಿಂಗ್ ಅದ್ಭುತವಾಗಿರುತ್ತದೆ. ಅವರಿಲ್ಲದೇ ಇದ್ದರೆ ಶೂನ್ಯ. ಇಂಗ್ಲೆಂಡ್ ಟೆಸ್ಟ್ ನಲ್ಲಿ ಬುಮ್ರಾ ಇಲ್ಲದೆಯೂ ವೇಗಿಗಳು ಉತ್ತಮ ಪ್ರದರ್ಶನ ನೀಡಿದರು. ಆದರೆ ಕಿರು ಮಾದರಿಯಲ್ಲಿ ಏನು ಕತೆ? ಎಂದು ಹರ್ಭಜನ್ ಸಿಂಗ್ ಪ್ರಶ್ನೆ ಮಾಡಿದ್ದಾರೆ.
ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡಾ ಮೊಹಮ್ಮದ್ ಶಮಿಯನ್ನು ತಂಡಕ್ಕೆ ವಾಪಸ್ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟೂರ್ನಮೆಂಟ್ ನಲ್ಲೂ ಶಮಿ ನಾಲ್ಕು ವಿಕೆಟ್ ಕಬಳಿಸಿದ್ದಾರೆ. ಫಾರ್ಮ್, ಫಿಟ್ನೆಸ್ ಇಲ್ಲದೇ ಇದ್ದರೂ ಅವರನ್ನು ತಂಡಕ್ಕೆ ಆಯ್ಕೆ ಮಾಡದಿರುವುದರ ಹಿಂದಿನ ಉದ್ದೇಶವೇನು ಎಂದು ಅಭಿಮಾನಿಗಳೂ ಪ್ರಶ್ನೆ ಮಾಡುತ್ತಿದ್ದಾರೆ.