ಕೋಲ್ಕತ್ತಾ: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ನಡೆದಿದ್ದ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದ ಪಿಚ್ ಬಗ್ಗೆ ಈಗ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಇಂಥಾ ಪಿಚ್ ನಲ್ಲಿ ಸಚಿನ್, ಕೊಹ್ಲಿಗೂ ಆಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಟೀಕಿಸಿದ್ದಾರೆ.
ಕೋಲ್ಕತ್ತಾ ಟೆಸ್ಟ್ ಕೇವಲ ಎರಡೂವರೆ ದಿನಗಳಿಗೆ ಮುಗಿದು ಹೋಗಿತ್ತು. 100 ರನ್ ಗಳ ಮೊತ್ತವೂ ಭಾರೀ ಮೊತ್ತ ಎನಿಸುವಂತಾಗಿತ್ತು. ಇಲ್ಲಿ ಅನಿರೀಕ್ಷಿತ ಬೌನ್ಸ್, ತಿರುವಿನಿಂದಾಗಿ ಬ್ಯಾಟಿಗರಿಗೆ ಬ್ಯಾಟಿಂಗ್ ಮಾಡುವುದೇ ಕಷ್ಟವಾಗಿತ್ತು. ಆದರೆ ಇಂತಹ ಪಿಚ್ ನಿರ್ಮಿಸಲು ಸ್ವತಃ ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರೇ ಕ್ಯುರೇಟರ್ ಗೆ ಆದೇಶ ನೀಡಿದ್ದರು ಎನ್ನಲಾಗಿದೆ.
ಇದರ ಬೆನ್ನಲ್ಲೇ ಗಂಭೀರ್ ಭಾರೀ ಟೀಕೆ ಎದುರಿಸುತ್ತಿದ್ದಾರೆ. ಇದೀಗ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಇದೇ ವಿಚಾರವಾಗಿ ಟೀಕಾ ಪ್ರಹಾರ ನಡೆಸಿದ್ದಾರೆ. ಇಂಗ್ಲೆಂಡ್ ನಲ್ಲಿ ನಮ್ಮ ಹುಡುಗರು ಆಡಿದ್ದಾಗ ಟೆಸ್ಟ್ ಕ್ರಿಕೆಟ್ ಎಷ್ಟು ರೋಮಾಂಚಕ ಎನಿಸಿತ್ತು. ಅಲ್ಲಿನದ್ದು ಅದ್ಭುತ ಪಿಚ್ ಆಗಿತ್ತು. ನಮ್ಮ ಹುಡುಗರು ಅಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅದು ನಿಜವಾದ ಟೆಸ್ಟ್ ಪಿಚ್. ಆದರೆ ಇಲ್ಲಿ? ಇದು ತೀರಾ ಕಳಪೆ ಪಿಚ್. ನೀವು ಸಚಿನ್ ತೆಂಡುಲ್ಕರ್ ಅಥವಾ ವಿರಾಟ್ ಕೊಹ್ಲಿಯಾಗಿದ್ದರೂ ಈ ಪಿಚ್ ನಲ್ಲಿ ಉಳಿಯಲು ತುಂಬಾ ಕಷ್ಟ ಎಂದಿದ್ದಾರೆ.