ಮುಂಬೈ: ಐಪಿಎಲ್ ಫ್ರಾಂಚೈಸಿ ಮಾಲಿಕರು ಪಂದ್ಯದ ಬಳಿಕ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟವಾಗುತ್ತದೆ ಎಂದು ಕನ್ನಡಿಗ ಕ್ರಿಕೆಟಿಗ ಕೆಎಲ್ ರಾಹುಲ್ ಹೇಳಿದ್ದಾರೆ.
ಅವರು ಈ ಹೇಳಿಕೆ ಮೂಲಕ ಮಾಜಿ ಮಾಲಿಕ ಸಂಜೀವ್ ಗೊಯೆಂಕಾಗೆ ಟಾಂಗ್ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತದೆ. ಐಪಿಎಲ್ ನಲ್ಲಿ ನಾಯಕನಾದರೆ ಮಾಲಿಕರು ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಎದುರಾಳಿ ತಂಡ 200 ರನ್ ಗಳಿಸಿದ್ದು ಯಾಕೆ, ನೀವು ಯಾಕೆ 120 ಗಳಿಸಿದ್ದೀರಿ? ಎಂದೆಲ್ಲಾ ಪ್ರಶ್ನೆ ಕೇಳುತ್ತಿರುತ್ತಾರೆ.
ರಾಷ್ಟ್ರೀಯ ತಂಡದಲ್ಲಿ ಇಂತಹ ಪ್ರಶ್ನೆಗಳನ್ನು ಕೇಳಲ್ಲ. ಯಾಕೆಂದರೆ ಅಲ್ಲಿ ಕೋಚ್ ಗಳಿಗೆ ಈ ವಿಚಾರಗಳು ಚೆನ್ನಾಗಿ ಗೊತ್ತಿರುತ್ತದೆ. ಆದರೆ ಐಪಿಎಲ್ ನಲ್ಲಿ ಮಾಲಿಕರಿಗೆ ರಿವ್ಯೂ ಕೊಡುವುದೇ ಕಷ್ಟದ ಕೆಲಸ. 10 ತಿಂಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದಕ್ಕಿಂತಲೂ ಎರಡು ತಿಂಗಳು ಐಪಿಎಲ್ ನಾಯಕನಾಗಿ ದೈಹಿಕ ಮತ್ತು ಮಾನಸಿಕವಾಗಿ ಹೆಚ್ಚು ದಣಿದಿದ್ದೇನೆ ಎನಿಸುತ್ತಿತ್ತು ಎಂದು ರಾಹುಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಈ ಹಿಂದೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದಾಗ ಕೆಎಲ್ ರಾಹುಲ್ ಗೆ ಮಾಲಿಕ ಸಂಜೀವ್ ಗೊಯೆಂಕಾ ಮೈದಾನದಲ್ಲೇ ಪ್ರಶ್ನೆ ಮಾಡುತ್ತಿದ್ದ ವಿಡಿಯೋಗಳು ವೈರಲ್ ಆಗಿದ್ದವು. ಬಳಿಕ ಇಬ್ಬರ ನಡುವೆ ವೈಮನಸ್ಯಗಳಿತ್ತು. ಇದಾದ ಬಳಿಕ ರಾಹುಲ್ ರನ್ನು ಲಕ್ನೋ ಕೈ ಬಿಟ್ಟಿತ್ತು. ಈಗ ಅವರು ಡೆಲ್ಲಿ ಪರ ಕೇವಲ ಆಟಗಾರನಾಗಿ ಆಡುತ್ತಿದ್ದಾರೆ. ಹೀಗಾಗಿ ಸಂಜೀವ್ ಗೊಯೆಂಕಾ ಉದ್ದೇಶಿಸಿಯೇ ರಾಹುಲ್ ಈ ಮಾತುಗಳನ್ನು ಹೇಳಿದ್ದಾರೆ ಎನ್ನಲಾಗುತ್ತಿದೆ.