ಚೆನ್ನೈ: ಐಪಿಎಲ್ 2026 ಕ್ಕೆ ಆಟಗಾರರ ಎಕ್ಸ್ ಚೇಂಜ್ ವ್ಯವಹಾರಗಳು ತೆರೆಮರೆಯಲ್ಲೇ ಜೋರಾಗಿ ನಡೆಯುತ್ತಿದೆ. ಈ ನಡುವೆ ರವೀಂದ್ರ ಜಡೇಜಾರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೈ ಬಿಡಲಿದೆ ಎಂಬ ಸುದ್ದಿ ಬಲವಾಗಿ ಕೇಳಿಬಂದಿದ್ದು ಅಭಿಮಾನಿಗಳು ಗರಂ ಆಗಿದ್ದಾರೆ.
ರವೀಂದ್ರ ಜಡೇಜಾ ಚೆನ್ನೈ ತಂಡದ ಜೀವಾಳವಾಗಿದ್ದರು. ಧೋನಿ, ಸುರೇಶ್ ರೈನಾ ಬಳಿಕ ಚೆನ್ನೈ ತಂಡದಲ್ಲಿ ಹೆಚ್ಚು ಜನಪ್ರಿಯರಾಗಿದ್ದು ರವೀಂದ್ರ ಜಡೇಜಾ. ಅದರಲ್ಲೂ 2023 ರ ಫೈನಲ್ ನಲ್ಲಿ ಧೋನಿಯೇ ಗೆಲುವಿನ ಭರವಸೆ ಕಳೆದುಕೊಂಡಿದ್ದಾಗ ನಂಬಲಸಾಧ್ಯ ರೀತಿಯಲ್ಲಿ ಬ್ಯಾಟಿಂಗ್ ಮಾಡಿ ಟ್ರೋಫಿ ಕೊಡಿಸಿದವರು ಜಡೇಜಾ.
ಎಷ್ಟೋ ಬಾರಿ ಇಂತಹ ಇನಿಂಗ್ಸ್ ಆಡಿ ಬ್ಯಾಟಿಂಗ್ ನಲ್ಲಿ ಮತ್ತು ಬೌಲಿಂಗ್ ನಲ್ಲೂ ತಂಡಕ್ಕೆ ಮಹತ್ವದ ಗೆಲುವು ಕೊಡಿಸಿದವರು ಜಡೇಜಾ. ಆದರೆ ಈಗ ಜಡೇಜಾರನ್ನೇ ಸಿಎಸ್ ಕೆ ಸೇಲ್ ಗಿಟ್ಟಿದೆ. ಜಡೇಜಾ ಮತ್ತು ಸ್ಯಾಮ್ ಕ್ಯುರೇನ್ ಅವರನ್ನು ಸೇಲ್ ಮಾಡಲು ಹೊರಟಿದ್ದು, ಸಂಜು ಸ್ಯಾಮ್ಸನ್ ರನ್ನು ತಂಡಕ್ಕೆ ಕರೆತರುವ ಪ್ರಯತ್ನ ಮಾಡುತ್ತಿದೆ ಎಂಬ ಸುದ್ದಿ ಕೇಳಿಬಂದಿದೆ.
ಇದಕ್ಕೆ ಫ್ಯಾನ್ಸ್ ಸಿಟ್ಟಿಗೆದ್ದಿದ್ದಾರೆ. ಸಿಎಸ್ ಕೆಗೆ ಸ್ವಲ್ಪವಾದ್ರೂ ಕೃತಜ್ಞತೆ ಬೇಡ್ವಾ? ಈ ಹಿಂದೆ ತಂಡಕ್ಕೆ ಐಪಿಎಲ್ ಟ್ರೋಫಿ ಕೊಡಿಸಿದ್ದು ಇದೇ ಜಡೇಜಾ. ಧೋನಿ ತುಂಬಾ ಇಷ್ಟಪಡುವ ಆಟಗಾರ. ಹಾಗಿದ್ದರೂ ಧೋನಿ ಕೂಡಾ ಜಡೇಜಾರನ್ನು ತಂಡದಿಂದ ಕೈಬಿಡುವುದನ್ನು ತಡೆದಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.