ಕೋಲ್ಕತ್ತಾ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಮೂರೇ ದಿನಕ್ಕೆ ಮುಕ್ತಾಯವಾಗುವುದು ಪಕ್ಕಾ ಆಗಿದೆ. ಇಂದಿನ ದಿನದಂತ್ಯಕ್ಕೆ ದಕ್ಷಿಣ ಆಫ್ರಿಕಾ 7 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿ ದಿನದಾಟ ಮುಗಿಸಿದೆ.
ಮೊದಲ ಇನಿಂಗ್ಸ್ ನಲ್ಲಿ ಆಫ್ರಿಕಾ 159 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ 189 ರನ್ ಗಳಿಗೆ ಆಲೌಟ್ ಆಗಿತ್ತು. ಇದರೊಂದಿಗೆ 30 ರನ್ ಗಳ ಮುನ್ನಡೆ ಪಡೆಯಿತು. ಬೌಲರ್ ಗಳಿಗೆ ಭಾರೀ ನೆರವು ನೀಡುತ್ತಿರುವ ಈ ಪಿಚ್ ನಲ್ಲಿ ಈ ಮುನ್ನಡೆ ಮಹತ್ವದ್ದಾಗಿದೆ.
ಎರಡನೇ ಇನಿಂಗ್ಸ್ ನಲ್ಲಿ ರವೀಂದ್ರ ಜಡೇಜಾ ನಾಲ್ಕು ವಿಕೆಟ್ ಕಬಳಿಸಿ ಮಿಂಚಿದರು. ಆದರೆ ನಾಯಕ ಟೆಂಬಾ ಬವುಮಾ ಮಾತ್ರ 29 ರನ್ ಗಳಿಸಿ ಅಚಲವಾಗಿ ನಿಂತಿದ್ದು ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆದರೆ ಅವರಿಗೆ ಯಾರೂ ತಕ್ಕ ಸಾಥ್ ನೀಡುತ್ತಿಲ್ಲ.
ಇದರಿಂದಾಗಿ ನಾಳೆ ಆಫ್ರಿಕಾ 150 ರೊಳಗೆ ಆಲೌಟ್ ಆದರೆ ಭಾರತಕ್ಕೆ ಕಡಿಮೆ ಗೆಲುವಿನ ಗುರಿ ಸಿಗಲಿದೆ. ಇದರಿಂದ ನಾಳೆಯೇ ಪಂದ್ಯ ಮುಗಿಯುವುದೂ ಬಹುತೇಕ ಖಚಿತವಾಗಿದೆ. ಇದೀಗ ಆಫ್ರಿಕಾ 63 ರನ್ ಗಳ ಮುನ್ನಡೆಯಲ್ಲಿದೆ.